ಇಸ್ಲಾಮಾಬಾದ್: ಭಾರತದ ಮುಂಬಯಿ ಮೇಲೆ ಉಗ್ರರ ದಾಳಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಶಂಕಿತ ಪಾಕಿಸ್ತಾನಿ ಉಗ್ರರನ್ನು ವಿದೇಶಿ ತನಿಖಾಗಾರರಿಗೆ ತನಿಖೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಯೂಸಫ್ ರಜಾ ಗಿಲಾನಿ ಸೋಮವಾರ ಹೇಳಿದ್ದಾರೆ.ಮುಂಬೈ ಉಗ್ರಗಾಮಿ ದಾಳಿಯಲ್ಲಿ ಮೂವರು ಬ್ರಿಟನ್ ನಾಗರಿಕರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಬ್ರಿಟನ್ ಪೊಲೀಸರಿಗೆ ಬಂಧಿಸಲ್ಪಟ್ಟ ಶಂಕಿತ ಉಗ್ರರನ್ನು ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪಾಕ್ ಅಧ್ಯಕ್ಷ ಜರ್ದಾರಿಯವರನ್ನು ಕೋರಿರುವುದಾಗಿ ಇಂಗ್ಲೆಂಡ್ ಪ್ರಧಾನಿ ಗೊರ್ಡಾನ್ ಬ್ರೌನ್ ಭಾನುವಾರದಂದು ಹೇಳಿದ್ದರು. " ನಾನು ನಿನ್ನೆ ಬ್ರಿಟಿಷ್ ಪ್ರಧಾನಿ ಬ್ರೌನ್‌ರನ್ನು ಭೇಟಿಯಾಗಿದ್ದಾಗ, ನಾವು ಶಂಕಿತರನ್ನು ವಿಚಾರಣೆ ನಡೆಸಬಹುದೆ ಎಂದು ಅವರು ಕೇಳಿದ್ದರು. 'ನಾವು ಅವಕಾಶ ನೀಡುವುದಿಲ್ಲ' ಎಂದು ನಾನು ಅವರಿಗೆ ತಿಳಿಸಿದ್ದೇನೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ" ಎಂಬುದಾಗಿ ಗಿಲಾನಿ ತಿಳಿಸಿದ್ದಾರೆ. " ಇದು ನಮ್ಮ ರಾಷ್ಟ್ರ ಮತ್ತು ನಮ್ಮ ಕಾನೂನನ್ನು ಜಾರಿಗೆ ತರುತ್ತೇವೆ. ನಾವು ನಮ್ಮ ಕಾನೂನನ್ನು ಪಾಲಿಸುತ್ತೇವೆ" ಎಂದು ಅವರು ಹೇಳಿದ್ದಾರೆ. |