ಹೈದರಬಾದ್(ಪಾಕಿಸ್ತಾನ): ಜಮಾತ್-ಉದ್-ದಾವಾದ ಮೇಲೆ ಹೇರಲಾದ ನಿಷೇಧದ ವಿರುದ್ಧ ಸುಮಾರು 200 ಪಾಕಿಸ್ತಾನೀ ಹಿಂದೂ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.
ಪಾಕಿಸ್ತಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು, ಅವರಲ್ಲಿ ಹೆಚ್ಚಿನವರು ಬಡ ಕೃಷಿ ಕಾರ್ಮಿಕರು ಆದರೆ ಅವರ ಪ್ರಕಾರ ಭಾರತದ ಹಿಂದೂಗಳ ಒತ್ತಡದಿಂದಾಗಿ ಜಮಾತ್-ಉದ್-ದಾವಾ ಧಾರ್ಮಿಕ ಸಂಸ್ಥೆಯ ಮೇಲೆ ನಿಷೇಧವನ್ನು ಹೇರಲಾಗಿದೆ.
"ನಾವು ಮುಸ್ಲಿಮರಲ್ಲ ಎಂದು ತಿಳಿದಿದ್ದೂ ನಮಗೆ ಆಹಾರ, ನೀರು ಒದಗಿಸುತ್ತಿರುವ ಸಂಸ್ಥೆಯೊಂದು ಉಗ್ರವಾದಿ ಸಂಘಟನೆಯಾಗಿರಲು ಹೇಗೆ ಸಾಧ್ಯ ?" ಎಂದು ಪ್ರತಿಭಟನಕಾರರಲ್ಲಿ ಒಬ್ಬರಾದ ಬಿಗಾ ರಾಮ್(40) ಹೇಳಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
"ಅವರು ಮಾನವತೆಯ ಮಿತ್ರರು. ನಾವು ಈ ನಿಷೇಧವನ್ನು ಖಂಡಿಸುತ್ತೇವೆ. ಇದು ಅನ್ಯಾಯ" ಎಂದು ಆಕೆ ಹೇಳಿದ್ದಾರೆ. ಪ್ರೆಸ್ ಕ್ಲಬ್ ಒಂದರ ಮುಂದೆ ಜಮಾವಣೆಗೊಂಡ ಪ್ರತಿಭಟನಕಾರರು ಜಮಾತ್ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದರು ಮತ್ತು "ಜಮಾತ್-ಉದ್-ದಾವಾ ಭಯೋತ್ಪಾದಕ ಸಂಘಟನೆಯಲ್ಲ" ಮತ್ತು "ಭಾರತೀಯರ ಒತ್ತಡದಿಂದಾದ ಜಮಾತ್-ಉದ್-ದಾವಾ ನಿಷೇಧವನ್ನು ನಾವು ಖಂಡಿಸುತ್ತೇವೆ" ಮುಂತಾದ ಬರಹಗಳನ್ನು ಹೊಂದಿದ್ದ ಬ್ಯಾನರ್‌ಗಳನ್ನು ಹಿಡಿದಿದ್ದರು.
ಉತ್ತರ ಪಾಕಿಸ್ತಾನದಲ್ಲಿ 2005ರಲ್ಲಿ 73,000 ಜನರನ್ನು ಬಲಿತೆಗೆದುಕೊಂಡ ಭೂಕಂಪದ ಸಂದರ್ಭ ಸಂತ್ರಸ್ತರಿಗೆ ಸಹಾಯ ಒದಗಿಸುವಲ್ಲಿ ಜಮಾತ್ ಮುಖ್ಯ ಪಾತ್ರ ವಹಿಸಿತ್ತು. |