ವಿಶ್ವಸಂಸ್ಥೆಯಿಂದ ನಿಷೇಧಕ್ಕೊಳಗಾಗಿರುವ ಜಮಾತ್-ಉದ್-ದಾವಾದ ಮದರಸಗಳು ಮತ್ತು ವಿದ್ಯಾಲಯಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಬಗ್ಗೆ ಪಾಕ್‌ನ ಪಂಜಾಬ್ ಪ್ರಾಂತ್ಯದ ಸರಕಾರ ಗಂಭೀರ ಚಿಂತನೆ ನಡೆಸಿದೆ.
ಈ ಶಿಕ್ಷಣ ಸಂಸ್ಥೆಗಳಿಗಳಲ್ಲಿ ಪಾಠ-ಪ್ರವಚನಗಳು ಶುರುವಾಗಿ ವಿದ್ಯಾರ್ಥಿಗಳು 2009ರ ಮಾರ್ಚ್‌ನ ಪರೀಕ್ಷೆ ಬರೆಯುವಂತಾಗಲು ಪಂಜಾಬ್ ಪ್ರಾಂತ್ಯದ ಶಾಲಾ ಶಿಕ್ಷಣ ವಿಭಾಗ ಈ ಬಗ್ಗೆ ವಿಚಾರ ನಡೆಸಿದೆ ಎಂದು ದ ನ್ಯೂಸ್ ಪತ್ರಿಕೆಯ ವರದಿಮಾಡಿದೆ.
ಮುಂಬಯಿ ಮೇಲಿನ ಉಗ್ರರ ದಾಳಿ ಹಿನ್ನಲೆಯಲ್ಲಿ, ವಿಶ್ವಸಂಸ್ಥೆಯ ನಿಷೇಧ ನಿರ್ದೇಶನದಂತೆ ಜಮಾತ್-ಉದ್-ದಾವಾದ ಶೈಕ್ಷಣಿಕ ಮತ್ತು ಧಾರ್ಮಿಕ ಸಂಸ್ಥೆಗಳ ಮೇಲೆ ಡಿಸೆಂಬರ್ 11ರಂದು ದಾಳಿ ನಡೆಸಿ ಅವುಗಳನ್ನು ಸೀಲ್ ಮಾಡಲಾಗಿದೆ.
ನಿಷೇಧಿತ ಸಂಘಟನೆಯ ಶೈಕ್ಷಣಿಕ ಸಂಸ್ಥೆಗಳಿಗೆ ಬೋಧಕರನ್ನು ನಿಯೋಜಿಸುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಮೂಲಗಳ ಪ್ರಕಾರ ಪಂಜಾಬ್‌ನ ಸ್ಥಳೀಯ ಶಿಕ್ಷಣ ವಿಭಾಗ ಜಮಾತ್-ಉದ್-ದಾವಾದ ಎಲ್ಲಾ ಶಿಕ್ಷಣ ಸಂಸ್ಥೆಗಳ ಅಂಕಿಅಂಶಗಳನ್ನು ಸಂಗ್ರಹಿಸಿದೆ. ಇವುಗಳ ಪ್ರಕಾರ ಜಮಾತ್‌ನ 26 ಪ್ರತಿಶತ ಶಾಲೆಗಳು ಉನ್ನತ ಮಾಧ್ಯಮಿಕ ವಿದ್ಯಾಲಯಗಳಾಗಿವೆ.
ಜಮಾತ್-ಉದ್-ದಾವಾದ ಒರ್ವ ಕಾರ್ಯಕರ್ತ ಅಬ್ದುಲ್ಲಾ ಮುಂತಜಿರ್ ಹೇಳುವಂತೆ ಅವರ ಸಂಘಟನೆಯು ಪಾಕಿಸ್ತಾನದಾದ್ಯಂತ 160ಕ್ಕೂ ಹೆಚ್ಚಿನ ಶಾಲೆಗಳನ್ನು ನಡೆಸುತ್ತಿದೆ, ಮತ್ತು ಈ ಶಾಲೆಗಳಲ್ಲಿ 30 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಪ್ರಸ್ತುತ ಪರಿಸ್ಥಿತಿಯ ಹಿನ್ನಲೆಯಲ್ಲಿ ಇವುಗಳಲ್ಲಿ ಹೆಚ್ಚಿನ ಶಾಲೆಗಳು ಮುಚ್ಚಿವೆ.
ಸರಕಾರ ಇವರೆಗೆ ತಮ್ಮ ಶಾಲೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ. |