ಗ್ಲಾಸ್ಗೊ ವಿಮಾನ ನಿಲ್ದಾಣ ಮತ್ತು ಲಂಡನ್ ನೈಟ್ ಕ್ಲಬ್‌ಗೆ ಸ್ಪೋಟಕಗಳು ತುಂಬಿದ ಕಾರನ್ನು ನುಗ್ಗಿಸಿ ಸ್ಪೋಟಿಸಲು ಪ್ರಯತ್ನಿಸಿದ್ದ ಇರಾಕಿ ಡಾಕ್ಟರ್ ಬಿಲಾಲ್ ಅಬ್ದುಲ್ಲಾಗೆ ಬುಧವಾರದಂದು ಕನಿಷ್ಠ 32 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಸ್ಪೋಟಕಗಳು ತುಂಬಿದ ಕಾರನ್ನು ವಿಮಾನ ನಿಲ್ದಾಣಕ್ಕೆ ನುಗ್ಗಿಸಲು ಪ್ರಯತ್ನಿಸುತ್ತಿದ್ದಾಗ ಅಬ್ದುಲ್ಲಾ ಸಹಚರ ಬೆಂಗಳೂರು ಮೂಲದ ಕಾಫೀಲ್ ಅಹಮ್ಮದ್ ಗಾಯಗೊಂಡು ಮೃತನಾಗಿದ್ದ ಮತ್ತು ಅಬ್ದುಲ್ಲಾ ಬಂಧಿಸಲ್ಪಟ್ಟಿದ್ದ.
ಬ್ರಿಟನ್‌ನಲ್ಲಿ ಜನಿಸಿದ ಆದರೆ ಇರಾಕ್‌ನಲ್ಲಿ ಬೆಳೆದ ಅಬ್ದುಲ್ಲಾಗೆ ಕನಿಷ್ಠ 32 ವರ್ಷ ಜೈಲನ್ನು ಒಳಗೊಂಡ ಜೀವಾವಧಿ ಶಿಕ್ಷೆಯನ್ನು ನ್ಯಾಯಾಮೂರ್ತಿ ಕೋಲಿನ್ ಮಾಕೈ ವಿಧಿಸಿದ್ದಾರೆ
ಅಬ್ದುಲ್ಲಾನನ್ನು 'ಧಾರ್ಮಿಕ ತೀವ್ರವಾದಿ ಮತ್ತು ಧರ್ಮಾಂಧ' ಎಂದಿರುವ ನ್ಯಾಯಾಧೀಶರು ಬಿಲಾಲ್‌ಗೆ, "ಎಲ್ಲಾ ಸಾಕ್ಷ್ಯಧಾರಗಳು ನಿನೋರ್ವ ಅಪಾಯಕಾರಿ ವ್ಯಕ್ತಿ ಎಂಬುದನ್ನು ಸೂಚಿಸುತ್ತವೆ, ನಿನ್ನ ಪ್ರಸ್ತುತ ಮಾನಸಿಕತೆಯಲ್ಲಿ ಬ್ರಿಟಿಷ್ ಸಾರ್ವಜನಿಕರಿಗೆ ತೀವ್ರ ಹಾನಿಯುಂಟು ಮಾಡುವ ಅಪಾಯವಿದೆ. ಈ ಅಂಶ ಮತ್ತು ಎರಡು ಸಂಚನ್ನು ಕಾರ್ಯಗತಗೊಳಿಸಲು ಪ್ರಯತ್ನಸಿದ ಪರಿಸ್ಥಿತಿಗಳಿಂದಾಗಿ ಈ ಎರಡು ಅಪರಾಧಗಳಿಗೆ ನಿನಗೆ ಸಲ್ಲಬಹುದಾದ ಏಕೈಕ ಸಜೆಯೆಂದರೆ ಜೀವಾವಧಿ ಶಿಕ್ಷೆ " ಎಂದು ಹೇಳಿದ್ದಾರೆ. |