ಮುಂಬಯಿ ದಾಳಿಯಲ್ಲಿ ಬಂಧಿತನಾಗಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪಾಕಿಸ್ತಾನೀಯ ಎಂಬುದಕ್ಕೆ ಸಾಕ್ಷಿ ತೋರಿಸಿ ಎಂದಿದ್ದ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರಿಗೆ ಸವಾಲೊಡ್ಡಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮುಂಬಯಿ ದಾಳಿಕೋರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದವನು ಮತ್ತು ಆತನ ಮನೆಯ ಸುತ್ತ ಸೈನಿಕರ ಪಡೆಯನ್ನು ನಿಯೋಜಿಸಲಾಗಿದ್ದು ಯಾರಿಗೂ ಆತನ ಪೋಷಕರನ್ನು ಸಂಧಿಸಲು ಅವಕಾಶ ನೀಡಲಾಗುತ್ತಿಲ್ಲ ಎಂದು ಹೇಳಿದ್ದಾರೆ.
"ನಾನು ಸ್ವತಃ ದೃಢಪಡಿಸಿಕೊಂಡಿದ್ದೇನೆ. ಕಸಬ್‌ನ ಮನೆ ಮತ್ತು ಹಳ್ಳಿಯನ್ನು ಭದ್ರತಾ ಪಡೆಗಳು ಸುತ್ತುವರೆದಿವೆ. ಆತನ ತಂದೆತಾಯಿಯನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡಲಾಗುತ್ತಿಲ್ಲ. ಹೀಗೇಕೆ ಮಾಡುತ್ತಿದ್ದಾರೆಂದು ನನಗರ್ಥವಾಗುತ್ತಿಲ್ಲ" ಎಂದು ಪಂಜಾಬ್ ಪ್ರಾಂತ್ಯದವರೇ ಆದ ಶರೀಫ್ ಜಿಯೊ ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
"ಜನರು ಮತ್ತು ಮಾಧ್ಯಮಗಳಿಗೆ ಇಮ್ರಾನ್ ತಂದೆತಾಯಿಯನ್ನು ಭೇಟಿಯಾಗುವ ಅವಕಾಶ ನೀಡಬೇಕು, ಇದರಿಂದ ಸತ್ಯ ಏನು ಎಂಬುದು ಬೆಳಕಿಗೆ ಬರುತ್ತದೆ. ನಾವು 'ಸ್ವವಿಮರ್ಶೆ' ಮಾಡಿಕೊಳ್ಳುವ ಅಗತ್ಯವಿದೆ" ಎಂದು ಶರೀಫ್ ಹೇಳಿದ್ದಾರೆ.
ಈ ಹಿಂದೆ ಮುಂಬಯಿ ಮೇಲೆ ದಾಳಿ ನಡೆಸಿದ 'ರಾಷ್ಟ್ರರಹಿತರು' ಪಾಕಿಸ್ತಾನದಲ್ಲಿ ಅಡಗಿರಬಹುದು ಎಂದು ಒಪ್ಪಿಕೊಂಡಿದ್ದ ಜರ್ದಾರಿ ಈಗ ಬೇರೆಯೇ ರಾಗ ಹಾಡುತ್ತಿದ್ದು ಮುಂಬಯಿ ದಾಳಿಕೋರರು ಪಾಕಿಸ್ತಾನದವರು ಎಂಬುದಕ್ಕೆ ಯಾವುದೇ ಸ್ಪಷ್ಟ ಸಾಕ್ಷ್ಯಾಧಾರ ಇಲ್ಲ ಎಂದು ಹೇಳಿದ್ದರು.
ಭಾರತ ಬಂಧಿತ ಉಗ್ರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದವನು ಎಂದು ಜಗಜ್ಜಾಹೀರುಗೊಳಿಸಿದ ಮತ್ತು ಕಸಬ್ ತಂದೆ ಆತನನ್ನು ತನ್ನ ಮಗನೆಂದು ಗುರುತಿಸಿದ ನಂತರ ಈ ವಿಷಯವನ್ನು ತೆರೆಮರೆಯಲ್ಲಿಡಲು ಪಾಕಿಸ್ತಾನದ ಭದ್ರತಾ ಸಂಸ್ಥೆಗಳು ಮತ್ತು ಸ್ಥಳೀಯ ಆಡಳಿತ ಇನ್ನಿಲ್ಲದ ಪ್ರಯತ್ನ ಆರಂಭಿಸಿವೆ.
ಜರ್ದಾರಿ ಅವರ ಆಡಳಿತವನ್ನು ಸಹ ದೂಷಿಸಿದ ಶರೀಫ್, ಪಾಕಿಸ್ತಾನದಲ್ಲಿ ಪ್ರಸ್ತುತ ಆಡಳಿತದ ಚುಕ್ಕಾಣಿ ಹಿಡಿದಿರುವ ಪಾಕಿಸ್ತಾನ್ಸ್ ಪೀಪಲ್ಸ್ ಪಾರ್ಟಿಯ ಆಡಳಿತ ವೈಖರಿ ಪಾಕಿಸ್ತಾನವನ್ನು 'ವಿಫಲ ರಾಷ್ಟ್ರ'ವನ್ನಾಗಿಸಿದೆ ಎಂದಿದ್ದಾರೆ. |