ಮುಂಬಯಿ ದಾಳಿಯ ಸಂರ್ಭ ಬಂಧಿಸಲ್ಪಟಟಿದ್ದ ಏಕೈಕ ಉಗ್ರ ಅಜ್ಮಲ್ ಅಮೀರ್ ಇಮ್ರಾನ್ ಅಲಿಯಾಸ್ ಕಸಬ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿ ಎಂದು ವರದಿ ಮಾಡಿದ್ದ ಜಿಯೊ ಚಾನೆಲ್ ವಿರುದ್ಧ ದಾಖಲಿಸಿಲಾದ ದೂರನ್ನು ಪಾಕಿಸ್ತಾನಿ ನ್ಯಾಯಾಲಯವೊಂದು ಸ್ವೀಕರಿಸಿದೆ.
ಪಾಕಿಸ್ತಾನದ ರಿಜಸ್ಟ್ರಾರ್ ಕಛೇರಿಯ ವಿರೋಧವನ್ನು ಕಡೆಗಣಿಸಿದ ಲಾಹೋರ್ ಹೈ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ಮಿಯಾನ್ ನಾಜಾಮುಜ್ಜಾಮಾನ್, ಜಿಯೊ ಟಿವಿಯ ಮಾಲಕ ಮತ್ತು ಸಿಬ್ಬಂದಿಗಳ ವಿರುದ್ಧ ದಾಖಲಿಸಲು ಉದ್ದೇಶಿಸಲಾಗಿದ್ದ ದೂರನ್ನು ಗುರುವಾರ ಸ್ವೀಕರಿಸಿದ್ದಾರೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕ ಸರ್ದಾರ್ ಹುರ್ ಬುಖಾರಿ ವೈಯಕ್ತಿಕವಾಗಿ ಜಿಯೊ ವಿರುದ್ಧ ದೂರು ಸಲ್ಲಿಸಿದ್ದಾರೆ.
ಜಿಯೊ ನ್ಯೂಸ್‌ನ ಲಾಹೋರ್ ಬ್ಯೂರೊ ಮುಖ್ಯಸ್ಥ, ವರದಿಗಾರರು, ಕ್ಯಾಮರ್ ಮ್ಯಾನ್ ಮತ್ತು ಮಾಲೀಕರ ಮೇಲೆ, ಅಂತಾರಾಷ್ಟ್ರೀಯ ಸ್ತರದಲ್ಲಿ ಪಾಕಿಸ್ತಾನದ ಇಮೇಜ್‌ಗೆ ಧಕ್ಕೆ ತಂದುದಕ್ಕಾಗಿ ದೂರು ದಾಖಲಿಸಲು ಪೋಲಿಸರಲ್ಲಿಗೆ ತೆರಳಿದಾಗ ಅವರು ದೂರನ್ನು ಸ್ವೀಕರಿಸಲು ನಿರಾಕರಿಸಿದರು ಎಂದು ಬುಖಾರಿ ಹೇಳಿದ್ದಾರೆ
ನಂತರ ಅವರು ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸುವಂತೆ ನ್ಯಾಯಾಲಯದ ಮೆಟ್ಟಿಲೇರಿದರು.
ಜಿಯೊ ಟಿವಿ ಇತ್ತೀಚಿಗೆ, ಕಸಬ್ ಪರೀದ್‌ಕೋಟ್‌ನವನು ಎಂದು ಅಲ್ಲಿನ ನಿವಾಸಿಗಳು ಅಂಗೀಕರಿಸಿದ ರಹಸ್ಯ ಚಿತ್ರೀಕರಣವನ್ನು ಪ್ರಸಾರ ಮಾಡಿತ್ತು. ಇದರಲ್ಲಿ ಅಜ್ಮಲ್ ಆರು ತಿಂಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿದ್ದ, ಆ ಸಂದರ್ಭ ತಾನು ಜಿಹಾದ್‌ಗೆ ತೆರಳುತ್ತಿರುವುದಾಗಿ ತನ್ನ ತಾಯಿಯಲ್ಲಿ ಹೇಳಿ ಹೋಗಿದ್ದ ಎಂದು ಫರೀದ್‌ಕೋಟ್‌ನ ನಿವಾಸಿ ಹೇಳಿದ್ದ. |