ಭಾರತದ ಅಲ್ಪಸಂಖ್ಯಾತರ ಸಚಿವ ಎ.ಆರ್ ಅಂತುಲೆ, ಮುಂಬಯಿ ಉಗ್ರ ನಿಗ್ರಹ ದಳ ಮುಖ್ಯಸ್ಥ ಹೇಮಂತ ಕರ್ಕರೆ ಅವರ ಹತ್ಯೆಯ ಕುರಿತು ನೀಡಿರುವ ಹೇಳಿಕೆ ಪಾಕಿಸ್ತಾನದ ಪತ್ರಿಕೆಗಳ ಮುಖಪುಟಗಳಲ್ಲಿ ಪ್ರತಿಧ್ವನಿಸಿದೆ.
ದ ನೇಶನ್‌ನ ಸಂಪಾದಕೀಯದಲ್ಲಿ ಭಾರತ ಮುಂಬಯಿ ಮೇಲಿನ 26/11 ದಾಳಿಯಲ್ಲಿ ಸ್ಥಲೀಯ ಸಂಘಟನೆಗಳ ಪಾತ್ರದ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಲಾಗಿದೆ. "ಭಾರತ ಸಾಕ್ಷ್ಯಧಾರಗಳನ್ನು ಪಾಕಿಸ್ತಾನದೊಂದಿಗೆ ಹಂಚಿಕೊಳ್ಳಲು ನಿರಾಕರಿಸಿರುವುದರಿಂದ ಈ ಹತ್ಯೆಗಳ ಹಿಂದಿನ ಸತ್ಯ, ಕೇವಲ ಅನುಮಾನವಾಗಿ ಉಳಿದಿದೆ. ಈ ಮೊದಲು ಸಹ ಎಟಿಎಸ್ ಮುಖ್ಯಸ್ಥ ಕರ್ಕರೆ ಅವರ ಹತ್ಯೆ ಹುಬ್ಬೇರುವಂತೆ ಮಾಡಿತ್ತಾದರೂ, ಈಗ ಭಾರತದ ಅಲ್ಪಸಂಖ್ಯಾತರ ಸಚಿವ ಕರ್ಕರೆ ಸಾವಿನ ಹಿಂದೆ 'ಉಗ್ರವಾದ ಮತ್ತು ಬೇರೆ ಇನ್ನೇನೊ' ಇದೆ ಎಂದು ಹೇಳಿರುವುದು ಹೆಚ್ಚಿನ ಗೊಂದಲಕ್ಕೆ ಕಾರಣವಾಗಿದೆ. ಈ ದಾಳಿಯ ಮೂಲವನ್ನು ಕಂಡು ಹುಡುಕಲು ಭಾರತ ಬಯಸುವುದಾದರೆ, ಈ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕಾಗುತ್ತದೆ" ಎಂಬುದಾಗಿ ಸಂಪಾದಕೀಯದಲ್ಲಿ ಬರೆಯಲಾಗಿದೆ.
ಪಾಕಿಸ್ತಾನದ 'ಜಂಗ್', 'ನಾವ-ಎ-ವಕ್ತ್', 'ಎಕ್ಸಪ್ರೆಸ್' ಮತ್ತು 'ಜರಾಸತ್' ಮುಂತಾದ ಎಲ್ಲಾ ಪ್ರಮುಖ ಉರ್ದು ದಿನಪತ್ರಿಕೆಗಳು ಅಂತುಲೆ ಹೇಳಿಕೆಗೆ ವಿವಿಧ ಅರ್ಥ ಕಲ್ಪಿಸಿವೆ. ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ 'ಅಂತುಲೆ ಪಾಕಿಸ್ತಾನ್ ಕೆ ಇಶಾರೆ ಪೆ ಚಲ್ ರಹೇ ಹೈ' (ಅಂತುಲೆ ಪಾಕಿಸ್ತಾನದ ಸೂಚನೆಯಂತೆ ನಡೆದುಕೊಳ್ಳುತ್ತಿದ್ದಾರೆ) ತಲೆಬರಹದಡಿ ಸುದ್ದಿ ಪ್ರಕಟವಾಗಿದೆ. ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಹಿಂದು ಉಗ್ರವಾದಿಗಳಿಂದ ಹತ್ಯೆಗೈಯಲ್ಪಟ್ಟಿದ್ದಾರೆ ಎಂದು ಮಾಧ್ಯಮಗಳಿಗೆ ಮತ್ತು ಸಂಸತ್ತಿಗೆ ಸೂಚಿಸಲು ಅಂತುಲೆ ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಎಕ್ಸ್‌ಪ್ರೆಸ್ ಪ್ರತಿಪಾದಿಸಿದೆ. ಜರಾಸತ್ ಪತ್ರಿಕೆ, ಮುಂಬಯಿ ಮೂಲದ ವಕೀಲ ಅಮೀನ್ ಸೋಲ್ಕರ್ ಕರ್ಕರೆ ಮತ್ತು ಇನ್ನಿಬ್ಬರು ಉನ್ನತ ಪೊಲೀಸ್ ಅಧಿಕಾರಿಗಳ ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಾ ಮುಂಬಯಿ ಹೈ ಕೋರ್ಟ್‌ಗೆ ಪಿಐಲ್ ಸಲ್ಲಿಸಿದ್ದಾರೆ ಎಂದಿದೆ. |