ಲಂಡನ್: ಮಾನವ ಕಳ್ಳಸಾಗಣೆ ಆರೋಪದ ಮೇಲೆ ಈ ವರ್ಷದ ಏಪ್ರಿಲ್‌ನಲ್ಲಿ 5 ವರ್ಷಗಳ ಕಾರಾಗೃಹ ಶಿಕ್ಷೆಗೆ ಗುರಿಯಾದ ಭಾರತೀಯ ಮೂಲದ ವ್ಯಕ್ತಿಗೆ ಬ್ರಿಟನ್ ಕೋರ್ಟೊಂದು 3 ಲಕ್ಷ ಪೌಂಡ್ ದಂಡ ಪಾವತಿಸುವಂತೆ ಸೂಚಿಸಿದೆ.
ಭಾರತದಿಂದ ಬ್ರಿಟನ್‌ಗೆ ಅಕ್ರಮ ವಲಸೆಗಾರರನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಶಿಕ್ಷೆಗೊಳಗಾದ 6 ಮಂದಿಯಲ್ಲಿ ಅಸೀಫ್ ಪಟೇಲ್ ಒಬ್ಬರಾಗಿದ್ದಾರೆ. ಮುಂದಿನ ವರ್ಷ ಜ.31ರೊಳಗೆ ಈ ಮೊತ್ತವನ್ನು ಪಾವತಿ ಮಾಡುವಂತೆ ಅಥವಾ 5 ವರ್ಷಗಳ ಜೈಲುಶಿಕ್ಷೆಯನ್ನು ಅನುಭವಿಸುವಂತೆ ಕೋರ್ಟ್ ಆದೇಶಿಸಿದೆ.
ಪಟೇಲ್ ಬೋಲ್ಟನ್‌ನಲ್ಲಿ ಮೊಬೈಲ್ ಶಾಪ್ ಮಾಲೀಕತ್ವ ಹೊಂದಿದ್ದು, ಕಳೆದ ಏ.21ರಂದು ಜೈಲು ಶಿಕ್ಷೆ ವಿಧಿಸಲಾಗಿದೆ. ಬ್ರಿಟನ್‌ಗೆ ಸಾಗಣೆಯಾದ ಪ್ರತಿಯೊಬ್ಬ ಅಕ್ರಮ ವಲಸಿಗ 8000 ಪೌಂಡ್‌ಗಳನ್ನು ಪಾವತಿ ಮಾಡಿದ್ದರೆಂದು ವರದಿಯಾಗಿತ್ತು. ಬ್ರಿಟನ್‌ಗೆ ದಕ್ಷಿಣ ಆಫ್ರಿಕಾ ಮೂಲಕ ಅಕ್ರಮವಾಗಿ ಭಾರತೀಯರ ಸಾಗಣೆಗೆ ದಕ್ಷಿಣ ಆಫ್ರಿಕಾದ ನಕಲಿ ಪಾಸ್‌ಪೋರ್ಟ್‌ಗಳನ್ನು ಆರೋಪಿಗಳು ತಯಾರಿಸುತ್ತಿದ್ದರೆಂದು ಹೇಳಲಾಗಿದೆ. ಪಾಸ್‌ಪೋರ್ಟ್ ಹೊಂದಿರುವವರು 6 ತಿಂಗಳ ಅವಧಿವರೆಗೆ ಬ್ರಿಟನ್‌ಗೆ ಪ್ರವಾಸಿಗಳಾಗಿ ನೆಲೆಸಬಹುದಿತ್ತು. |