ಮುಂಬಯಿ ದಾಳಿ ತೆರೆಮರೆಗೆ ತಳ್ಳಿ ಬಿಡಬಹುದಾದಂತಹ ಸಾಮಾನ್ಯ ಘಟನೆಯಲ್ಲ ಎಂದಿರುವ ಅಮೆರಿಕ ದಾಳಿಯ ನಂತರ ತನ್ನ ನೆಲದಿಂದ ಉಗ್ರವಾದನ್ನು ತೊಡೆದು ಹಾಕುವತ್ತ ಪಾಕಿಸ್ತಾನ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿಲ್ಲ ಎಂದು ಹೇಳಿ ಕಠಿಣ ಸಂದೇಶವೊಂದನ್ನು ಪಾಕ್‌ಗೆ ರವಾನಿಸಿದೆ.
ಅಮೆರಿಕಕ್ಕೆ ತಮ್ಮ ಅಪ್ರಕಟಿತ ಭೇಟಿಯನ್ನು ಶನಿವಾರದಂದು ಮುಗಿಸಿರುವ ಪಾಕಿಸ್ತಾನದ ರಾಷ್ಟ್ರೀಯ ರಕ್ಷಣಾ ಸಲಹಗಾರ ಮಹಮ್ಮದ್ ಅಲಿ ದುರಾನಿ ಅವರು ಕಾಂಡೊಲೀಸಾ ರೈಸ್, ಅಮೆರಿಕ ರಕ್ಷಣಾ ಸಲಹಗಾರ ಸ್ಟೀಫನ್ ಹೇಡಿನ್ಲೆ ಮತ್ತು ಪೆಂಟಗಾನ್ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ.
ಮುಂಬಯಿ ದಾಳಿಗೆ ಕುರಿತಂತೆ ಪಾಕಿಸ್ತಾನ ಇದುವರೆಗೆ ಕೈಗೊಂಡಿರುವ ಕ್ರಮಗಳು ಸಾಕಾಗುವುದಿಲ್ಲ ಎಂದು ಕಾಂಡೊಲೀಸಾ ರೈಸ್ ಬುಧವಾರ ಹೇಳಿದ್ದರು. "ನೀವು ಉಗ್ರವಾದ ಸಮಸ್ಯೆಯತ್ತ ಕ್ರಮ ಕೈಗೊಳ್ಳಬೇಕು. ಅವರು ರಾಷ್ಟ್ರರಹಿತರು ಎಂದಷ್ಟೇ ಹೇಳಿದರೆ ಸಾಕಾಗುವುದಿಲ್ಲ. ಅವರು ಪಾಕಿಸ್ತಾನದ ನೆಲದಿಂದ ಕಾರ್ಯನಿರ್ವಹಿಸುತ್ತಿದ್ದರೆ ಅವರನ್ನು ಹತ್ತಿಕ್ಕುವುದು ಪಾಕಿಸ್ತಾನದ ಜವಾಬ್ದಾರಿ" ಎಂದು ಅವರು ಪಾಕಿಸ್ತಾನಕ್ಕೆ ಸಂದೇಶ ರವಾನಿಸಿದ್ದರು.
ದುರಾನಿ ಅವರೊಂದಿಗಿನ ಭೇಟಿಯ ಸಂದರ್ಭ ಇದಕ್ಕಿಂತಲೂ ಹೆಚ್ಚು ಕಠಿಣ ಸಂದೇಶವನ್ನು ರೈಸ್ ರವಾನಿಸಿದ್ದಾರೆ ಎಂದು ಅಮೆರಿಕದ ರಾಜತಾಂತ್ರಿಕ ಮೂಲಗಳು ಹೇಳಿದ್ದಾಗಿ ಡಾನ್ ಸುದ್ದಿಪತ್ರಿಕೆ ವರದಿ ಮಾಡಿದೆ.
ಮುಂಬಯಿ ದಾಳಿ ಸಾಮಾನ್ಯ ಘಟನೆಯಲ್ಲ ಮತ್ತು ಪಾಕಿಸ್ತಾನ ಇದನ್ನು ಸಣ್ಣ ಸಂಗತಿಯಂತೆ ಪರಿಗಣಿಸಿದಲ್ಲಿ ಇದರಿಂದ ಪಾಕ್‌ಗೆ ತೊಂದರೆ ಉಂಟಾಗುತ್ತದೆ ಎಂದು ಪಾಕ್‌ಗೆ ತಿಳಿಸಲಾಗಿದೆ ಎಂದು ಮೂಲಗಲು ತಿಳಿಸಿವೆ.
ಪಾಕ್‌ಗೆ ಅಮೆರಿಕ ನೀಡಿದ ಸಂದೇಶವೆಂದರೆ, "ನಾವು ಮೂರನೇ ಬಾರಿಗೆ ಇಂತಹ ವಿಚಾರವನ್ನು ಪ್ರಸ್ತಾಪಿಸುತ್ತಿದ್ದೇವೆ. ನಾಲ್ಕನೇ ಬಾರಿಗೆ ನಿಮ್ಮನ್ನು ಸಮಸ್ಯೆಯಿಂದ ಹೊರತರಲು ನಾವು ಬರದಿರಬಹುದು. ಜಾಗತಿಕ ಉಗ್ರವಾದ ಕೇವಲ ಭಾರತ-ಪಾಕಿಸ್ತಾನ ಕಲಹಕ್ಕೆ ಸಂಬಂಧಿಸಿದ್ದಲ್ಲ. ಲಷ್ಕರೆ ಮತ್ತು ಜಮಾತ್ ಅನ್ನು ನಾವು ಅಲ್ ಕೈದಾದಂತಯೇ ಪರಿಗಣಿಸುತ್ತೇವೆ. ಇದನ್ನು ಕೇವಲ ಭಾರತ-ಪಾಕಿಸ್ತಾನ ಕಲಹವೆಂದಷ್ಟೇ ಪರಗಣಿಸುವುದನ್ನು ಪಾಕಿಸ್ತಾನ ನಿಲ್ಲಿಸಬೇಕು" ಎಂದು ಮೂಲಗಳು ಹೇಳಿವೆ.
ಪಾಕಿಸ್ತಾನದ ಪ್ರಧಾನಿ ಯೂಸಫ್ ರಜಾ ಗಿಲಾನಿ ಮತ್ತು ವಿದೇಶ ಮಂತ್ರಿ ಶಾ ಮಹಮ್ಮದ್ ಖುರೇಷಿ ಅವರು, ಜಮಾತ್ ನಡೆಸುತ್ತಿರುವ ಚಾರಿಟೇಬಲ್ ಸಂಸ್ಥೆಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿಕೆ ನೀಡಿರುವುದು ಉಗ್ರವಾದದ ವಿರುದ್ಧ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಪಾಕಿಸ್ತಾನದ ಪ್ರಾಮಾಣಿಕತೆಯ ಬಗ್ಗೆ ಸಂದೇಹ ಹುಟ್ಟಿಸಿವೆ ಎಂದು ಮೂಲಗಳು ತಿಳಿಸಿವೆ. |