ನಿಷೇಧಿತ ಜಮಾತ್-ಉದ್-ದಾವಾ ಸಂಘಟನೆಯ ಪರವಾಗಿ, ಜಮಾತ್-ಎ-ಇಸ್ಲಾಮ್ ಸೇರಿದಂತೆ ಪಾಕಿಸ್ತಾನದ ಹಲವು ರಾಜಕೀಯ ಪಕ್ಷಗಳು ರ‌್ಯಾಲಿ ಕೈಗೊಂಡಿವೆ ಮತ್ತು ಜಮಾತ್ ಮೇಲಿನ ನಿಷೇಧವನ್ನು ರದ್ದುಗೊಳಿಸಬೇಕು ಹಾಗು ಭಾರತದೊಂದಿಗಿನ ಎಲ್ಲಾ ಮಾತುಕತೆಗಳನ್ನು ಕೊನೆಗೊಳಿಸಬೇಕೆಂದು ಕರೆ ನೀಡಿವೆ.
ಭಾರತ ಮತ್ತು ಅಮೆರಿಕದ ಒತ್ತಡದಡಿಯಲ್ಲಿ ಜಮಾತ್ ಮೇಲೆ ವಿಶ್ವಸಂಸ್ಥೆ ನೀಷೇಧ ಹೇರಿದೆ ಎಂದು ಪಕ್ಷಗಳು ಪ್ರತಿಪಾದಿಸಿವೆ. ವಿಶ್ವಸಂಸ್ಥೆ 'ಅನಗತ್ಯ ಮತ್ತು ಅನುಚಿತ ಆತುರ'ದಿಂದ ವರ್ತಿಸಿದೆ ಮತ್ತು ಜಮಾತ್ ದೃಷ್ಟಿಕೋನವನ್ನು ತಿಳಿದುಕೊಳ್ಳುವ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಅಪಾದಿಸಿವೆ.
ಲಾಹೋರ್‌ನಲ್ಲಿ ಕೈಗೊಳ್ಳಲಾದ ಸಭೆಯಲ್ಲಿ, ಜಮಾತ್ ವಿರುದ್ಧ ವಿಶ್ವಸಂಸ್ಥೆ ಕೈಗೊಂಡ ಕ್ರಮವನ್ನು ಖಂಡಿಸುವ ನಿರ್ಧಾರವನ್ನು ಪಕ್ಷಗಳು ಕೈಗೊಂಡವು ಮತ್ತು ಕಾಶ್ಮೀರ ಸಮಸ್ಯೆಯ ಕುರಿತ ನಿರ್ಣಯಗಳು 60 ವರ್ಷಗಳಿಂದ ಕಾರ್ಯರೂಪಕ್ಕೆ ಬರದೇ ನೆನೆಗುದಿಯಲ್ಲಿವೆ ಎಂಬುದನ್ನು ನೆನಪಿಸಿದವು.
ಭಾರತವನ್ನು "ಪಾಕಿಸ್ತಾನ ವಿರೋಧಿ ರಾಷ್ಟ್ರ" ಎಂದು ಘೋಷಿಸಬೇಕು ಮತ್ತು ಅದರೊಂದಿಗಿನ ಎಲ್ಲಾ ಸಂಬಂಧಗಳನ್ನು ಮುರಿದುಕೊಳ್ಳಬೇಕು ಹಾಗು ಶಾಂತಿ ಸಂಧಾನ ಮತ್ತು ಮಾತುಕತೆಗಳ ನಾಟಕವನ್ನು ಕೊನೆಗೊಳಿಸಬೇಕು" ಎಂದು ಪಕ್ಷಗಳು ಕೈಗೊಂಡ ನಿರ್ಣಯದಲ್ಲಿ ಬಯಸಿವೆ.
ಕಾಶ್ಮೀರದ ಬಗೆಗೆ ಕೈಗೊಳ್ಳಲಾಗಿರುವ ನಿರ್ಧಾರಗಳನ್ನು ಗೌರವಿಸುವಂತೆ ಭಾರತದ ಮೇಲೆ ಒತ್ತಡ ಹೇರಬೇಕೆಂದು ಪಕ್ಷಗಳು ಬಯಸಿವೆ ಮತ್ತು "ಮೂಲಭೂತ ವಿವಾದವಾದ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳದೆ ಶಾಂತಿಯ ಕನಸು ಕಾಣುವುದು ಸಾಧ್ಯವಿಲ್ಲ" ಎಂದು ಅಭಿಪ್ರಯಿಸಿವೆ. |