ಮುಂಬಯಿ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಪ್ರಕ್ಷುಬ್ದ ವಾತರವರಣ ಹೆಚ್ಚಿರುವ ಹಿನ್ನಲೆಯಲ್ಲಿ ಸೋಮವಾರ ಪಾಕ್‌ನ ವಾಯುಪಡೆಯ ಫೈಟರ್ ಜೆಟ್‌ಗಳು ಹಲವು ಪ್ರಮುಖ ನಗರಗಳ ಮೇಲೆ ಹಾರಾಟ ನಡೆಸಿ ಸಿದ್ಧತೆ ನಡೆಸಿವೆ.
"ಪ್ರಸ್ತುತ ಸನ್ನಿವೇಶಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಪಿಎಎಫ್ ಅಭ್ಯಾಸ ನಡೆಸಿದೆ" ಎಂದು ಪಾಕಿಸ್ತಾನ ವಾಯುಪಡೆಯ ವಕ್ತಾರ ಏರ್ ಕಮಾಂಡರ್ ಹಮ್‌ಯುನ್ ವಿಕಾರ್ ಜೆಪ್ಯಾರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಪಾಕ್‌ನ ವಾಯುಸೇನೆಯ ಅಭ್ಯಾಸಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಭಾರತದ ವಾಯುಸೇನೆ ಮತ್ತು ಭೂಸೇನೆ ಪಶ್ಚಿಮ ಗಡಿರೇಖೆಯ ಬಳಿ ಜಮಾವಣೆಗೊಂಡವು. ಎಚ್ಚರಿಕೆಯ ಕ್ರಮವಾಗಿ ಡೈಸ್ಲಾಮರ್, ಬರ್ಮರ್ ಮತ್ತು ಭುಜ್ ಪ್ರದೇಶಗಳಲ್ಲಿಯೂ ವಾಯುಸೇನೆಯನ್ನು ನಿಯೋಜಿಸಲಾಗಿದೆ. ಬಿಎಸ್ಎಫ್ ಜಾಗೃತವಾಗಿದೆ.
ಏತನ್ಮಧ್ಯೆ, ಪಾಕಿಸ್ತಾನ ಪ್ರಧಾನಿ ಯೂಸಫ್ ರಜಾ ಗಿಲಾನಿ, ದೇಶವನ್ನು ರಕ್ಷಿಸುವ ಭರವಸೆ ನೀಡಿದ್ದಾರೆ. "ಸಂಸತ್ತಿನ ಒಳಗೆ ಮತ್ತು ಹೊರಗಿರುವ ಎಲ್ಲಾ ರಾಜಕೀಯ ಶಕ್ತಿಗಳು, ಪಾಕಿಸ್ತಾನದ ಜನತೆ ಮತ್ತು ಸೇನಾಪಡೆಗಳು ದೇಶವನ್ನು ರಕ್ಷಿಸಿಕೊಳ್ಳಲು ಸಂಪೂರ್ಣವಾಗಿ ಒಗ್ಗಟ್ಟಾಗಿದೆ" ಎಂದು ಅವರು ಹೇಳಿದ್ದಾರೆ.
"ದೇಶ ಸೂಕ್ತ ವ್ಯಕ್ತಿಗಳ ಕೈಯಲ್ಲಿ ಸುರಕ್ಷಿತವಾಗಿದೆ ಮತ್ತು ನಮ್ಮಲ್ಲಿ ಉನ್ನತ ಸಾಮರ್ಥ್ಯವನ್ನು ಹೊಂದಿದ ಗಣರಾಜ್ಯಕ್ಕೆ ಬದ್ಧವಾದ ಸೇನೆಯಿದೆ. ಸೇನೆ ಮತ್ತು ಪ್ರಜಾತಂತ್ರ ಸರಕಾರ ಒಗ್ಗಟ್ಟಾಗಿದ್ದು ನಾವು ದೇಶವನ್ನು ರಕ್ಷಿಸಿಕೊಳ್ಳಲು ಸನ್ನದ್ಧರಾಗಿದ್ದೇವೆ" ಎಂದು ಗಿಲಾನಿ ಹೇಳಿದ್ದಾರೆ. |