ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತಕ್ಕೆ ಉತ್ತರ ನೀಡಲು ನಾವ್ ರೆಡಿ: ಪಾಕ್ ಸೇನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತಕ್ಕೆ ಉತ್ತರ ನೀಡಲು ನಾವ್ ರೆಡಿ: ಪಾಕ್ ಸೇನೆ
ಭಾರತವು ತಮ್ಮ ದೇಶದೊಳಗೆ ಆಕ್ರಮಣ ನಡೆಸಿದ ಕೆಲವೇ ಕ್ಷಣಗಳಲ್ಲಿ ಸೂಕ್ತ ಪ್ರತ್ಯುತ್ತರ ನೀಡಲು ಪಾಕಿಸ್ತಾನದ ಸೇನಾ ಪಡೆಗಳು ಸರ್ವ ಸನ್ನದ್ಧವಾಗಿವೆ ಎಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೇಜ್ ಕಯಾನಿ ಹೇಳಿರುವುದರೊಂದಿಗೆ ಭಾರತ-ಪಾಕಿಸ್ತಾನದ ನಡುವಣ ಯುದ್ಧದ ಕಾರ್ಮೋಡ ದಟ್ಟವಾಗತೊಡಗಿದೆ.

ಮುಂಬಯಿ ಮೇಲಿನ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯೊಂದಿಗೆ, ಪಾಕಿಸ್ತಾನದ ಕಾರ್ಯಾಚರಣೆ ಸಿದ್ಧತೆ ಯಾವ ಮಟ್ಟದಲ್ಲಿದೆ ಎಂದು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯೊಂದಿಗಿನ ಭೇಟಿ ಸಂದರ್ಭ ಕಯಾನಿ ಅವರು ವಿವರಿಸಿದ್ದಾರೆ.

ಯಾವುದೇ ರೀತಿಯ ಪರಿಸ್ಥಿತಿ ಎದುರಾದರೂ ಸಶಸ್ತ್ರ ಪಡೆಗಳು 'ಸಂಪೂರ್ಣವಾಗಿ ಸನ್ನದ್ಧವಾಗಿವೆ' ಮತ್ತು ನಮ್ಮ ಯೋಧರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಾಗಿದ್ದಾರೆ ಎಂದು ಕಯಾನಿ ಹೇಳಿರುವುದಾಗಿ ಸರಕಾರದ ಪರವಾಗಿರುವ ದಿ ನ್ಯೂಸ್ ಡೈಲಿ ವರದಿ ಮಾಡಿದೆ.

ಅಲ್ಲದೆ, ಭಾರತವು ಆಕ್ರಮಣ ಮಾಡಿದ ಕೆಲವೇ ಕ್ಷಣಗಳಲ್ಲಿ ಪಾಕಿಸ್ತಾನವು ಸೂಕ್ತ ಪ್ರತಿಕ್ರಿಯೆ ನೀಡಲಿದೆ ಎಂದೂ ಕಯಾನಿ ಹೇಳಿರುವುದಾಗಿ ವರದಿಯಾಗಿದೆ.

ಭಾರತದ ಯಾವುದೇ ಒತ್ತಡ ತಂತ್ರಗಳಿಗೆ ಮಣಿದರೆ, ಅದು ಪಾಕಿಸ್ತಾನದ ಮೇಲೆ ನವದೆಹಲಿಯು ಮತ್ತಷ್ಟು ಒತ್ತಡ ಹೇರಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಉಭಯ ನಾಯಕರೂ ಅಭಿಪ್ರಾಯಪಟ್ಟರು ಎಂದು ದಿ ಡೈಲಿ ನ್ಯೂಸ್ ಹೇಳಿದೆ.

ಇಸ್ಲಾಮಾಬಾದ್, ರಾವಲ್ಪಿಂಡಿ, ಕರಾಚಿ ಮತ್ತು ಲಾಹೋರ್ ಮುಂತಾದ ಪ್ರಮುಖ ಪಟ್ಟಣಗಳ ಮೇಲೆ ಪಾಕಿಸ್ತಾನ ವಾಯುಪಡೆಯ ಯುದ್ಧ ವಿಮಾನಗಳು ಸರ್ವೇಕ್ಷಣಾ ಹಾರಾಟ ನಡೆಸಿದ ಕೆಲವೇ ಕ್ಷಣಗಳಲ್ಲಿ ಜರ್ದಾರಿ-ಕಯಾನಿ ಭೇಟಿಯಾಗಿ ಪರಿಸ್ಥಿತಿ ವಿಶ್ಲೇಷಿಸಿದರು.

ಕರಾಚಿಯಲ್ಲಿ ಮಾತನಾಡಿದ ಪ್ರಧಾನಿ ಯೂಸುಫ್ ರಜಾ ಗಿಲಾನಿ ಕೂಡ, ಪೂರ್ವ ಗಡಿಭಾಗದಲ್ಲಿ ಯಾವುದೇ ಅತಿಕ್ರಮಣವಾದರೂ, ದೇಶವೇ ಏಕತೆಯಿಂದ ಹೋರಾಡುತ್ತದೆ ಎಂದು ಹೇಳಿದರು.

ಸೋಮವಾರ ರಾತ್ರಿ, ಅಮೆರಿಕದ ಜಂಟಿ ಸೇನಾ ಪಡೆ ಮುಖ್ಯಸ್ಥ, ಅಡ್ಮಿರಲ್ ಮೈಕ್ ಮುಲ್ಲನ್ ಅವರೂ ಕಯಾನಿಯನ್ನು ಭೇಟಿಯಾಗಿದ್ದರು. ಮಾತುಕತೆ ವೇಳೆ, ಭಾರತವು ಆಕ್ರಮಣ ಮಾಡಿದರೆ, ದೇಶದ ರಕ್ಷಣೆಯ ಹಕ್ಕುಗಳಿಗೆ ಪಾಕ್ ಪಡೆಗಳು ಬದ್ಧವಾಗಿರುತ್ತವೆ ಎಂದು ಕಯಾನಿ ಸ್ಪಷ್ಟಪಡಿಸಿರುವುದಾಗಿ ಡೈಲಿ ನ್ಯೂಸ್ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇಶವನ್ನು ರಕ್ಷಿಸಿಕೊಳ್ಳಲು ಸಿದ್ಧರಾಗಿದ್ದೇವೆ: ಗಿಲಾನಿ
ಜೀವಭಯ ತೊರೆದು ಬೂಟು ಎಸೆದಿದ್ದ ಜೈದಿ
ಪಾಕ್ ವಾಯುಸೇನಾ ಅಭ್ಯಾಸ: ನಾಗರೀಕ ವಿಮಾನಯಾನ ವಿಳಂಬ
ಅಮೆರಿಕ ಉನ್ನತ ಮಿಲಿಟರಿ ಅಧಿಕಾರಿ ಪಾಕ್‌ಗೆ
'ಬುಷ್ ಶೂ'ಗೆ ಭಾರೀ ಡಿಮ್ಯಾಂಡ್: ಬೇಡಿಕೆಯ ಮಹಾಪೂರ
ಹೀಗಿರುತ್ತದಂತೆ ಭಯೋತ್ಪಾದಕರ ಕನಸಿನ ಭಾರತ!