ಮುಂಬಯಿ ದಾಳಿಯ ಸಂದರ್ಭ ಜೀವಂತ ಸೆರೆಹಿಡಿಯಲ್ಪಟ್ಟ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪಾಕಿಸ್ತಾನಿ ಎಂಬುದನ್ನು ದೃಢಪಡಿಸುವ ಹೇಳಿಕೆ ನೀಡಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಈಗ ತಮ್ಮ ಹೇಳಿಕೆಯಿಂದ ಹಿಂದೆ ಜಾರಿದ್ದಾರೆ.ಪಾಕಿಸ್ತಾನ ಮುಂಬಯಿ ದಾಳಿಯ ಹಿಂದಿದೆ ಎಂದು ದೂಷಿಸುವುದನ್ನು ಭಾರತ ನಿಲ್ಲಿಸಬೇಕು ಎಂದು ಶರೀಫ್ ಹೇಳಿದ್ದಾರೆ. ಮುಂಬಯಿ ದಾಳಿಯಲ್ಲಿ ಕಾರ್ಯಾಚರಿಸಿದ ಉಗ್ರರು ಪಾಕಿಸ್ತಾನಿಯರು ಎಂಬ ಬಗ್ಗೆ ಭಾರತ ಸರಕಾರ ಬಲವಾದ ಸಾಕ್ಷ್ಯಾಧಾರಗಳನ್ನು ನೀಡಬೇಕು ಮತ್ತು ಸಾಕ್ಷ್ಯಾಧಾರಗಳನ್ನು ನೀಡಿದಲ್ಲಿ ತಾವು ಸ್ವತಃ ಜರ್ದಾರಿಯವರಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುವುದಾಗಿ ಅವರು ಹೇಳಿದ್ದಾರೆ.ಈ ಮೊದಲು ಕಸಬ್ ಪಾಕಿಸ್ತಾನಿ ನಾಗರಿಕ ಎಂಬ ಭಾರತದ ವಾದವನ್ನು ಶರೀಫ್ ಸಮರ್ಥಿಸಿದ್ದರು. ಅವರು ತಾವು ಸ್ವತಃ ಕಸಬ್ ಮನೆಯ ಬಗೆಗಿನ ಮಾಧ್ಯಮ ವರದಿಗಳನ್ನು ದೃಢಪಡಿಸಿಕೊಂಡಿರುವುದಾಗಿ ಹೇಳಿದ್ದರು." ನಾನು ಸ್ವತಃ ದೃಢಪಡಿಸಿಕೊಂಡಿದ್ದೇನೆ. ಕಸಬ್‌ನ ಮನೆ ಮತ್ತು ಹಳ್ಳಿಯನ್ನು ಭದ್ರತಾ ಪಡೆಗಳು ಸುತ್ತುವರೆದಿವೆ. ಆತನ ತಂದೆತಾಯಿಯನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡಲಾಗುತ್ತಿಲ್ಲ. ಹೀಗೇಕೆ ಮಾಡುತ್ತಿದ್ದಾರೆಂದು ನನಗರ್ಥವಾಗುತ್ತಿಲ್ಲ" ಎಂದು ಪಂಜಾಬ್ ಪ್ರಾಂತ್ಯದವರೇ ಆದ ಶರೀಫ್ ಜಿಯೊ ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. |