ಭಾರತದೊಂದಿಗೆ ಯುದ್ಧದ ಸಾಧ್ಯತೆಗಳನ್ನು ನಿರಾಕರಿಸಿದ ಪಾಕಿಸ್ತಾನ ಪ್ರಧಾನಿ ಯೂಸಫ್ ರಜಾ ಗಿಲಾನಿ ಭಾರತ ಸರಕಾರ ತಮ್ಮ ಗುಪ್ತಚರ ವಿಭಾಗದ ವೈಫಲ್ಯವನ್ನು ಮರೆಮಾಚಲು ಪಾಕಿಸ್ತಾನವನ್ನು ಹರಕೆಯ ಕುರಿಯನ್ನಾಗಿಸಲು ಪ್ರಯತ್ನಿಸುತ್ತಿದೆ ಎಂದು ಬುಧವಾರ ಅಪಾದಿಸಿದ್ದಾರೆ.
"ನನ್ನ ಪರಿಶೀಲನೆ ಪ್ರಕಾರ ಯಾವುದೇ ಯುದ್ಧ ನಡೆಯುವುದಿಲ್ಲ" ಎಂದು ಅವರು ಲಾಹೋರ್‌ನಲ್ಲಿ ಹೇಳಿದ್ದಾರೆ.
ಆದರೆ, ಸಂದರ್ಭ ಒದಗಿದಲ್ಲಿ ಪಾಕ್ ಸೇನೆ ಅದನ್ನು ಎದುರಿಸಲು ಸಿದ್ಧವಾಗಿದೆ ಎಂದು ಅವರು ಪುನರುಚ್ಛರಿಸಿದರು.
ಮುಂಬಯಿ ದಾಳಿಯ ಹಿನ್ನಲೆಯಲ್ಲಿ ಭಾರತ ಸರಕಾರದ ಮೇಲೆ 'ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರ ಒತ್ತಡವಿತ್ತು' ಎಂದು ಗಿಲಾನಿ ಹೇಳಿದ್ದಾರೆ.
"ಈ ಘಟನೆಗೆ ಸಂಬಂಧಿಸಿದಂತೆ ಗುಪ್ತಚರ ಸಂಸ್ಥೆ ವಿಫಲಗೊಂಡಿತ್ತು ಮತ್ತು ಅವರೀಗ ಯಾರನ್ನಾದರೂ ಬಲಿಯಕುರಿಯನ್ನಾಗಿ ಮಾಡಬೇಕೆಂದಿದ್ದಾರೆ" ಎಂದು ಅವರು ಅಪಾದಿಸಿದರು.
"ನಾವು ಎಲ್ಲಾ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ, ನಮಗೆ ಯಾರೊಂದಿಗೂ ಯುದ್ಧ ಬೇಕಾಗಿಲ್ಲ" ಎಂದು ಅವರು ಹೇಳಿದ್ದಾರೆ.
ಮುಂಬಯಿ ದಾಳಿಯ ಹಿಂದೆ ಲಷ್ಕರೆ ತೊಯ್ಬಾ ಸೇರಿದಂತೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ಕೈವಾಡವಿದೆಯೆಂದು ಭಾರತ ಅಪಾದಿಸಿದೆ.
"ಯಾರಾದರೂ ನಮ್ಮೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತನಾಡುತ್ತಿದ್ದರೆ, ಅವರು ಅದಕ್ಕೆ ಪುರಾವೆ ಒದಗಿಸಬೇಕು. ಆಧಾರವಿಲ್ಲದೆ ನಾವು ನಿರ್ಣಯ ಕೈಗೊಳ್ಳುವುದು ಸಾಧ್ಯವಿಲ್ಲ" ಎಂದು ಗಿಲಾನಿ ಹೇಳಿದ್ದಾರೆ. |