ಮುಂಬೈ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ದಿನನಿತ್ಯ ಸ್ಥಿತಿ ಉದ್ವಿಗ್ನವಾಗುತ್ತಲಿದ್ದು, ಒಂದು ವೇಳೆ ಪೂರ್ಣ ಪ್ರಮಾಣದ ಯುದ್ಧ ನಡೆದಲ್ಲಿ ಪಾಕಿಸ್ತಾನಕ್ಕೆ ವಿಪತ್ಕಾರಕವಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ಲೇಷಕರ ಪ್ರಕಾರ,ಒಂದು ವೇಳೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಪೂರ್ಣ ಪ್ರಮಾಣದ ಯುದ್ಧ ಸಂಭವಿಸಿದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ಪಾಕ್‌ಗೆ ಹಿನ್ನೆಡೆಯಾಗಲಿದ್ದು, ಪ್ರತ್ಯೇಕ ರಾಷ್ಟ್ರದ ಬೇಡಿಕೆಗೆ ಚಾಲನೆ ದೊರೆಯಲಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಆಗ್ನೆಯ ಭಾಗದಲ್ಲಿರುವ ಬಲೂಚಿಸ್ತಾನ್ ಮತ್ತು ಫಶ್ತೂನ್ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಅಫಘಾನಿಸ್ತಾನಿಯರ 'ಪಕ್ತುನಿಸ್ತಾನ್' ಎನ್ನುವ ಪ್ರತ್ಯೇಕ ರಾಷ್ಟ್ರ ಬೇಡಿಕೆಗೆ ಮತ್ತೆ ಜೀವತುಂಬುವ ಸಾಧ್ಯತೆಗಳಿದ್ದು,ದೇಶದ ಆಂತರಿಕ ಭಧ್ರತೆ ಛಿದ್ರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಾಲಿಬಾನಿಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಪಾಕ್ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡು ಭಾರತದ ಗಡಿಗೆ ವರ್ಗಾಯಿಸುವುದರಿಂದ ತಾಲಿಬಾನ್ ಉಗ್ರರಿಗೆ ದೇಶದೊಳಗೆ ನುಗ್ಗಲು ಮತ್ತು ಪ್ರಭಾವಿಯಾಗಿ ಬೆಳೆಯಲು ಮತ್ತಷ್ಟು ಅವಕಾಶಗಳನ್ನು ಕಲ್ಪಿಸಿದಂತಾಗುತ್ತದೆ.
ಉಗ್ರರಿಗೆ ಸಾರ್ವಜನಿಕರ ಸಹಕಾರ ಹಾಗೂ ಬೆಂಬಲ ದೊರೆತು ಪ್ರಮುಖ ಶತ್ರುವಾದ ಭಾರತದ ವಿರುದ್ಧ ಹೋರಾಡಲು ಉಗ್ರರೇ ದೇಶದ ನಿಜವಾದ ರಕ್ಷಕರು ಎನ್ನುವ ಭಾವನೆ ತಳೆದು, ಪಾಕ್ ಆಂತರಿಕ ಸಮಸ್ಯೆಗಳಿಗೆ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಹಾಕಿದಂತಾಗುತ್ತದೆ ಎಂದು ವಿಶ್ಲೇಷಕರು ಸಾಧ್ಯಸಾಧ್ಯತೆಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ನೀಡಿದ 7.6 ಬಿಲಿಯನ್ ಡಾಲರ್ ಸಾಲ ನೆನೆಗುದಿಗೆ ಬೀಳಲಿದ್ದು, ದೇಶದ ಆರ್ಥಿಕತೆಗೆ ಅಗತ್ಯವಿರುವ ವಿದೇಶಿ ಬಂಡವಾಳ ಹೂಡಿಕೆಗೆ ಭಾರಿ ಪ್ರಮಾಣದ ಕೊರತೆಯಾಗಿ ಪಾಕ್‌ನ ಸಂಪೂರ್ಣ ಆರ್ಥಿಕತೆ ನಾಶವಾಗಲಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ. |