ವಾಣಿಜ್ಯ ನಗರಿ ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ನಂತರ ಭಾರತ ಉಪಖಂಡದಲ್ಲಿ ಉಂಟಾಗಬಹುದಾದ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಬಿಲ್ ಕ್ಲಿಂಟನ್ ಅಧ್ಯಕ್ಷತೆಯಲ್ಲಿ ಶಾಂತಿ ಪಡೆಯೊಂದನ್ನು ರಚಿಸುವುದಾಗಿ ಹಿಲರಿ ಕ್ಲಿಂಟನ್ ಅವರು ತಿಳಿಸಿರುವುದಾಗಿ ಡೈಲಿ ಮೇಲ್ ಪತ್ರಿಕೆ ವರದಿ ತಿಳಿಸಿದೆ.
ಭಾರತ ಮತ್ತು ಪಾಕಿಸ್ತಾನ ಪ್ರದೇಶದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ಅಮೆರಿಕದ ಸಂಭಾವ್ಯ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ರಚಿಸಲು ಉದ್ದೇಶಿಸಿರುವ ವಿಶೇಷ ಶಾಂತಿಪಡೆಗೆ ತಮ್ಮ ಪತಿ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಸಾಧ್ಯತೆ ಇರುವುದಾಗಿ ಮೂಲಗಳು ಹೇಳಿವೆ.
ಮಧ್ಯ ಏಷ್ಯಾ ಹಾಗೂ ಬಾಲ್ಕನ್ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ರಿಚರ್ಡ್ ಹಾಲ್ ಬ್ರೋಕ್ ಅವರ ಮುಖಂಡತ್ವದಲ್ಲಿ ಕ್ಲಿಂಟನ್ ಎರಡು ಬಾರಿ ವಿಶೇಷ ಶಾಂತಿ ಪಡೆಯನ್ನು ನೇಮಕ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. |