ಮುಂಬೈ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸಾಕ್ಷ್ಯಾಧಾರ ಒದಗಿಸಿದೆ. ಆ ನೆಲೆಯಲ್ಲಿ ಪಾಕ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಮಂಗಳವಾರ ಆಗ್ರಹಿಸಿದ್ದಾರೆ.
ಮುಂಬೈ ದಾಳಿಯ ಸಂದರ್ಭದಲ್ಲಿ ಸೆರೆಸಿಕ್ಕ ಏಕೈಕ ಉಗ್ರ ಕಸಬ್ ದೇಶದ ಪ್ರಜೆ ಹೌದೆಂದು ಹೇಳಿಕೆ ನೀಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ದುರಾನಿ ಅವರನ್ನು ವಜಾಗೊಳಿಸಲಾಗಿತ್ತು. ಈಗ ನವಾಜ್ ಶರೀಫ್ ಕೂಡ ಪಾಕ್ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುಡುಗಿದ್ದಾರೆ.
26/11ರ ದಾಳಿ ಕುರಿತಂತೆ ಪಾಕ್ ಈವರೆಗೂ ಯಾವುದೇ ನಿಖರವಾದ ನಿರ್ಧಾರ ಕೈಗೊಂಡಿಲ್ಲ. ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ದಿಕ್ಕು ತಪ್ಪಿಸುವ ನಾಟಕ ಆಡುತ್ತಿದೆ.
ಅಲ್ಲದೇ ಮುಂಬೈ ದಾಳಿ ಕುರಿತಂತೆ ಭಾರತ ಒದಗಿಸಿರುವ ಪುರಾವೆಗಳನ್ನು ಪಾಕ್ ಸ್ವತಃ ತನಿಖೆ ನಡೆಸುತ್ತದೆ ಎಂದು ಹೇಳಿಕೆ ನೀಡಿತ್ತಲ್ಲದೇ. ಒಂದು ವೇಳೆ ತಪ್ಪಿತಸ್ಥರು ಎಂದು ಕಂಡುಬಂದಲ್ಲಿ ಅಂತಹವರನ್ನು ದೇಶದ ಕಾನೂನಿನಂತೆ ಶಿಕ್ಷೆಗೆ ಗುರಿಪಡಿಸಲಾಗುವುದೇ ವಿನಃ ಯಾವುದೇ ಪಾಕ್ ಪ್ರಜೆಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ ಎಂದು ಗಿಲಾನಿ ಸ್ಪಷ್ಟಪಡಿಸಿದ್ದಾರೆ.
ಮುಂಬೈ ದಾಳಿಯ ಹಿಂದೆ ಪಾಕ್ ಮೂಲದ ಲಷ್ಕರ್ ಕೈವಾಡ ಇರುವುದಾಗಿ ಭಾರತ ಪುರಾವೆ ಒದಗಿಸಿದರೂ ಕೂಡ ಪಾಕ್ ರಾಗ ಬದಲಿಸುತ್ತಿದೆ. ಅಮೆರಿಕದ ಒತ್ತಡಕ್ಕೆ ಮಣಿಯದ ಅದು, ಇಸ್ರೇಲ್ ದಾಳಿಗೆ ಮೌನವಾಗಿರುವ ಅಂತಾರಾಷ್ಟ್ರೀಯ ಸಮುದಾಯ ಮುಂಬೈ ದಾಳಿಯನ್ನೇ ದೊಡ್ಡದಾಗಿ ಹೇಳುತ್ತಿವೆ ಎಂದು ಗಿಲಾನಿ ತಿರುಗೇಟು ನೀಡಿದ್ದಾರೆ. |