ಶತಾಯುಷಿ ಅವಿವಾಹಿತ ವಧುವಿಗೆ ಶತಾಯುಷಿ ಅವಿವಾಹಿತ ವರ ಬೇಕಾಗಿದ್ದಾನೆ!
ಅಚ್ಚರಿಯಾಗುತ್ತಿದೆಯೇ? ನೀವು ನಂಬಲೇಬೇಕು. ಚೀನಾದ 107 ವರ್ಷ ವಯಸ್ಸಿನ 'ವಧು'ವೊಬ್ಬಾಕೆ ಒಂದಷ್ಟು ಹರಟೆ ಹೊಡೆಯಲು ಶತಾಯುಷಿಯಾಗಿರುವ ತನ್ನ ಮೊದಲ ಪತಿಯಾಗುವಾತನ ಹುಡುಕಾಟದಲ್ಲಿದ್ದಾಳೆ.
ಯೌವನ ಕಾಲದಲ್ಲಿ ಮದುವೆಯಾಗಲು ಹೆದರುತ್ತಿದ್ದ ಈ ಹಿರಿಯಜ್ಜಿ ವಾಂಗ್ ಗಿಯಿಂಗ್, ಇದೀಗ ತನ್ನ ಸೋದರ ಸಂಬಂಧಿಗಳಿಗೆ ಹೊರೆಯಾಗಬಾರದು ಎಂದು ಯೋಚಿಸಿ, ಈ ನಿರ್ಧಾರಕ್ಕೆ ಬಂದಿದ್ದಾಳೆ. 102 ವರ್ಷದವಳಿದ್ದಾಗ ಆಕೆ ಕಾಲು ಮುರಿದುಕೊಂಡ ಕಾರಣದಿಂದಾಗಿ, ತನ್ನದೇ ಕೆಲಸ ಮಾಡಿಕೊಳ್ಳಲು ತ್ರಾಸ ಅನುಭವಿಸುತ್ತಿದ್ದಳು. ಅನ್ಯರಿಗೆ ಹೊರೆಯಾಗಬಾರದು ಎಂದು ತೀರ್ಮಾನಿಸಿರುವ ಈಕೆ ಈಗ ನವವಧು.
'ಈಗಾಗ್ಲೇ ನನಗೆ 107 ವರ್ಷ ಆಗಿದೆ. ಗಂಡನನ್ನು ಹುಡುಕಲು ಇನ್ನು ಕೂಡ ಅವಸರ ಮಾಡದಿದ್ದರೆ ಹೇಗೆ' ಎಂಬುದು ಆಕೆ ಕೇಳುತ್ತಿರುವ ಪ್ರಶ್ನೆ.
ಉಪ್ಪಿನ ವ್ಯಾಪಾರಿಯೊಬ್ಬಳ ಮಗಳಾಗಿ ಹುಟ್ಟಿದ್ದ ವಾಂಗ್, ತನ್ನ ಚಿಕ್ಕಪ್ಪಂದಿರು, ಮಾವಂದಿರು ತಮ್ಮ ಪತ್ನಿಯರಿಗೆ ಬೈಯುವುದನ್ನು, ಹೊಡೆಯುವುದನ್ನು ನೋಡುತ್ತಲೇ ಬೆಳೆದವಳು. ಆಗಾಗ್ಗೆ ತನ್ನ ಚಿಕ್ಕಮ್ಮಂದಿರು ಮುಚ್ಚಿದ ಬಾಗಿಲ ನಡುವೆ ಅಳುತ್ತಿರುವುದನ್ನು ಕೇಳಿಸಿಕೊಂಡವಳು.
ನನ್ನ ಸುತ್ತಮುತ್ತ ಮದುವೆಯಾಗಿರುವವರದೆಲ್ಲ ಇದೇ ಪಾಡು. ಹೀಗಾಗಿ ನನಗೆ ಮದುವೆ ಬಗ್ಗೆ ಭಯ ಹುಟ್ಟಿಕೊಂಡಿತು ಎಂದು ಆಕೆ, ಅದೊಂದು ಕಾಲದಲ್ಲಿ ಚೀನಾದಲ್ಲಿ ಸ್ತ್ರೀಯರ ಹಕ್ಕುಗಳಿಗೆ ಕಡಿವಾಣ ಇದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾ ವಿವರಿಸಿದ್ದಾಳೆ.
ವಾಂಗ್‌ಳ ತಂದೆ, ಯಾತಿ, ಅಕ್ಕ ಎಲ್ಲರೂ ತೀರಿಕೊಂಡಿದ್ದಾರೆ. ಆಕೆಗೆ ಮದುವೆ ಬಗ್ಗೆ ಭಯ ಈಗಲೂ ಇದೆ. 74 ವರ್ಷದವರೆಗೂ ಆಕೆ ಗದ್ದೆಯಲ್ಲಿ ದುಡಿದು ಸಂಪಾದಿಸುತ್ತಿದ್ದಳು. ಆದರೆ ಈಗ ವಯಸ್ಸು ಕೈಕೊಟ್ಟಿದೆ. ಆಕೆ ಸೋದರ ಸಂಬಂಧಿಯ ಮನೆಯಲ್ಲಿ ಇರಲಾರಂಭಿಸಿದಳು. ಈಗ ಅವರು ಕೂಡ ವೃದ್ಧರಾಗಿದ್ದಾರೆ. ಅಂದರೆ ಅವರಲ್ಲಿ ಅತಿ ಕಿರಿಯ ವ್ಯಕ್ತಿಯ ವಯಸ್ಸು 60 ವರ್ಷ. ಈ ಮುತ್ತಜ್ಜಿಯನ್ನು ನೋಡಿಕೊಳ್ಳುವುದು ಅವರಿಗೂ ಕಷ್ಟವೇ. "ನನ್ನ ಅಣ್ಣನ ಮಕ್ಕಳೆಲ್ಲರೂ ವೃದ್ಧರಾಗುತ್ತಿದ್ದಾರೆ. ಅವರ ಮಕ್ಕಳೆಲ್ಲ ಅವರದೇ ಆದ ಕುಟುಂಬ ಹೊಂದಿದ್ದಾರೆ. ನಾನು ಹೊರೆಯಾಗುತ್ತಿದ್ದೇನೆ" ಎಂಬುದು ವಾಂಗ್ ಕೊರಗು.
ಸ್ಥಳೀಯ ಅಧಿಕಾರಿಗಳು ವಾಂಗ್‌ಗೆ 100 ವರ್ಷದ ಆಸುಪಾಸಿನ ವರನನ್ನು ತಲಾಶೆ ಮಾಡುವಲ್ಲಿ ಸಂತೋಷದಿಂದಲೇ ಮುಂದೆ ಬಂದಿದ್ದಾರೆ. ಹಾಗಾಗಿ ವೃದ್ಧಾಪ್ಯ ನಿಲಯದಲ್ಲೆಲ್ಲಾ ಹುಡುಕಾಟ ಆರಂಭಿಸಿದ್ದಾರಂತೆ. |