ಮುಂಬೈ ದಾಳಿಯ ಹಿಂದಿನ ರೂವಾರಿಗಳನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂಬ ವಾದವನ್ನು ಅಕ್ಷರಶ ಅಲ್ಲಗಳೆದಿರುವ ಬ್ರಿಟನ್, ಇವರು ಆ ರಾಷ್ಟ್ರದ ಕಾನೂನನ್ನು ಮುರಿದಿರುವ ಕಾರಣ, ಇವರನ್ನು ಪಾಕಿಸ್ತಾನದಲ್ಲೇ ವಿಚಾರಿಸಬೇಕು ಎಂಬುದನ್ನು ತಾನು ಬೆಂಬಲಿಸುವುದಾಗಿ ಹೇಳಿದೆ.
ದಾಳಿಯಲ್ಲಿ ಪಾಕಿಸ್ತಾನ ಮೂಲದ ವ್ಯಕ್ತಿಗಳು ಭಾಗಿವಹಿಸಿದ್ದಾರೆ ಎಂಬ ಕುರಿತು ಪುರಾವೆಗಳಿವೆ ಮತ್ತು ಇಸ್ಲಾಮಾಬಾದ್ ತನ್ನ ಬದ್ಧತೆಗಳಿಗೆ ತಕ್ಕಂತೆ ಕಾರ್ಯಕೈಗೊಳ್ಳಬೇಕು ಎಂದು ಬ್ರಿಟನ್ ವಿದೇಶಾಂಗ ಸಚಿವ ಡೇವಿಡ್ ಮಿಲಿಬಂದ್ ಹೇಳಿದ್ದಾರೆ.
"ತಪ್ಪಿತಸ್ಥರನ್ನು ಪಾಕಿಸ್ತಾನಿ ಕಾನೂನಂತೆ ವಿಚಾರಿಸಬೇಕು ಎಂಬುದನ್ನು ನಾವು ಬೆಂಬಲಿಸುತ್ತೇವೆ. ಯಾಕೆಂದರೆ ಅವರು ಪಾಕಿಸ್ತಾನದ ಕಾನೂನು ಮುರಿದಿದ್ದಾರೆ. ಅವರು ಪಾಕಿಸ್ತಾನದ ಕಾನೂನು ಮುರಿದಿದ್ದಾರೆ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಘನತೆ ಮತ್ತು ಸಾಮಾನ್ಯ ಪ್ರಜ್ಞೆಗೆ ಧಕ್ಕೆಯುಂಟುಮಾಡಿದ್ದಾರೆ ಎಂದು ಅವರು ಟಿವಿ ಕಾರ್ಯಕ್ರಮ ಒಂದರಲ್ಲಿ ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮುಂಬೈ ದಾಳಿಯ ಮೂಲ ಪಾಕಿಸ್ತಾನ ಎಂಬುದರಲ್ಲಿ ಯಾವದೇ ಸಂಶಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. |