ರಾಷ್ಟ್ರವು ಎಲ್‌ಟಿಟಿಇ ಮತ್ತು ತಮಿಳರ ನಡುವಿನ ಭಿನ್ನತೆಯನ್ನು ಗಮನಿಸಬೇಕು ಎಂದು ಹೇಳಿರುವ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಷೆ ಅವರು ಸರ್ಕಾರವು ಭಯೋತ್ಪಾದನೆಯ ವಿರುದ್ಧಮಾತ್ರ ಹೋರಾಡುತ್ತಿದೆ ಮತ್ತು ಯುದ್ಧ ಜರ್ಜರಿತ ಉತ್ತರ ಶ್ರೀಲಂಕಾದಲ್ಲಿ ಪ್ರಜಾಪ್ರಭುತ್ವವು ಶೀಘ್ರವೇ ಪುನಸ್ಥಾಪನೆಗೊಳ್ಳಲಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳ ಸಂಪಾದಕರುಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ತಮಿಳರ ಕುರಿತು ಸರ್ಕಾರದ ನೀತಿಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ, ಸರ್ಕಾರವು ತಮಿಳರ ವಿರೋಧಿ ಅಲ್ಲ, ಅದು ಭಯೋತ್ಪಾದಕರ ವಿರೋಧಿ ಎಂದು ಹೇಳಿದರು.
ನಮಗೆ ಶಾಂತಿ ಬೇಕಿದೆ. ನಾವು ತಮಿಳರ ವಿರೋಧಿಗಳಲ್ಲ. ನಾವು ಭಯೋತ್ಪಾದನೆಯ ವಿರೋಧಿಗಳು. ನೀವು(ಮಾಧ್ಯಮಗಳು) ತಮಿಳರು, ಅವರ ಸಂಘಟನೆ ಅಥವಾ ಪಕ್ಷಗಳನ್ನು ಬೆಂಬಲಿಸುವ ಎಲ್ಲಾ ಹಕ್ಕನ್ನು ಹೊಂದಿದ್ದೀರಿ. ಆದರೆ ದಯವಿಟ್ಟು ಉಗ್ರವಾದಿಗಳನ್ನು ಬೆಂಬಲಿಸದಿರಿ ಎಂದು ಅವರು ವಿನಂತಿಸಿದರು.
ಕೋಮುವಾದವು ತಮಿಳರಿಂದ ಇಲ್ಲವೇ, ಮುಸ್ಲಿಮರಿಂದ ಅಥವಾ ಸಿಂಹಳರಿಂದ- ಯಾರಿಂದಲೇ ಎದುರಾದರೂ, ಇದು ರಾಷ್ಟ್ರದ ಏಕತೆಗೆ ಭೀತಿಯೊಡ್ಡುತ್ತದೆ ಎಂದು ಅವರು ನುಡಿದರು. |