ನನ್ನ ಆಡಳಿತಾವಧಿಯಲ್ಲಿ ಜನಪ್ರಿಯನಾಗದೆ ಇರಬಹುದು, ಆದರೆ ತಲೆಬಾಗಿಲ್ಲ ಎಂದು ಎರಡು ಅವಧಿಗಳ ಕಾಲ ಅಮೆರಿಕದ ಅಧ್ಯಕ್ಷ ಪಟ್ಟ ಅಲಂಕರಿಸಿದ್ದ ನಿರ್ಗಮಿತ ಜಾರ್ಜ್ ಡಬ್ಲ್ಯು ಬುಷ್ ತಿಳಿಸಿದ್ದಾರೆ.ನಿರ್ಗಮಿತ ಅಧ್ಯಕ್ಷರಾದ ಬುಷ್ ಗುರುವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು,ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದಲ್ಲದೆ,ಅಭಿವೃದ್ದಿ ಕಾರ್ಯಗಳನ್ನು ಮಾಡಿರುವುದಾಗಿ ಹೇಳಿದರು. ಸೆಪ್ಟೆಂಬರ್ 11ರ ಭಯೋತ್ಪಾದನಾ ದಾಳಿಯ ನಂತರ ಸಾರ್ವಜನಿಕರು ಬೆಂಬಲವಾಗಿ ನಿಂತಿದ್ದರಿಂದ ಮತ್ತೆ ಅಂತಹ ಘಟನೆ ಪುನರಾವರ್ತನೆ ಆಗಿಲ್ಲ ಎಂದ ಅವರು, ಅಮೆರಿಕ ಯಾವುದೇ ಯಾವಾಗಲೂ ಭಯೋತ್ಪಾದನೆಗೆ ತಲೆಬಾಗದು, ಅಂತಹ ಘಟನೆಯೂ ಮರುಕಳಿಸದು ಎಂದು ಈ ಸಂದರ್ಭದಲ್ಲಿ ಘೋಷಿಸಿದರು.ನಾನು ಕೈಗೊಂಡ ಕೆಲವೊಂದು ಕಠಿಣ ನಿರ್ಧಾರಗಳನ್ನು ನೀವು ಒಪ್ಪದಿರಬಹುದು, ಆದರೆ ನೀವು ಅದನ್ನು ನಂತರವಾದರೂ ಒಪ್ಪಿಕೊಳ್ಳುತ್ತೀರಿ ಎಂಬ ಭರವಸೆ ಇರುವುದಾಗಿ ಬುಷ್ ಆಶಾಭಾವ ವ್ಯಕ್ತಪಡಿಸಿದರು.ಜನವರಿ 20ಕ್ಕೆ ಬುಷ್ ದಶಕಗಳ ಕಾಲದ ಅಧಿಕಾರ ಗದ್ದುಗೆಯಿಂದ ಕೆಳಗಿಳಿಯಲಿದ್ದು, ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮ ಅವರು ಅಧ್ಯಕ್ಷ ಪಟ್ಟ ಅಲಂಕರಿಸಲಿದ್ದಾರೆ.ಆ ಹಿನ್ನೆಲೆಯಲ್ಲಿ ತನ್ನ ಎಂಟು ವರ್ಷಗಳ ಆಡಳಿವಧಿಯಲ್ಲಿನ ಭಯೋತ್ಪಾದನೆ, ಎರಡು ಯುದ್ಧ, ಆರ್ಥಿಕ ದಿವಾಳಿತನದ ಬಗ್ಗೆ ತಮ್ಮ ಕೊನೆಯ ಅಧ್ಯಕ್ಷೀಯ ಸ್ಥಾನದ 13ನಿಮಿಷಗಳ ಭಾಷಣದಲ್ಲಿ ವಿವರವಾಗಿ ವಿವರಿಸಿ, ಜನರು ನೀಡಿದ ಸಹಕಾರಕ್ಕೆ ಕೃತಜ್ಞತೆ ಹೇಳಿದರು. |