ಪಾಕಿಸ್ತಾನದಲ್ಲಿ ಅಮೆರಿಕದ ಏಜೆಂಟ್‌ನಂತೆ ವರ್ತಿಸುತ್ತಿರುವ ರಾಷ್ಟ್ರೀಯ ಭದ್ರತಾ ಮಾಜಿ ಸಲಹೆಗಾರ ನಿವೃತ್ತ ಮೇಜರ್ ಜನರಲ್ ಮಹಮ್ಮದ್ ಅಲಿ ದುರಾನಿ ವಿರುದ್ಧ ಪಾಕ್‌ನ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ (ಐಎಸ್‌ಐ) ಇದೀಗ ಮಾನಸಿಕ ಯುದ್ಧ(ಸೈಕೋಲಜಿ ವಾರ್)ಕ್ಕೆ ಸನ್ನದ್ಧವಾಗಿದೆ.
ಮುಂಬೈ ದಾಳಿಯ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್ ಪಾಕ್ ಪ್ರಜೆಯಾಗಿದ್ದರು ಕೂಡ, ಪಾಕ್ ಒಪ್ಪಿಕೊಳ್ಳಲು ತಯಾರಾಗಿಲ್ಲವಾಗಿತ್ತು. ಆದರೆ ದುರಾನಿ ಅವರು, ಏಕಾಏಕಿಯಾಗಿ ಹೌದು ಅಜ್ಮಲ್ ನಮ್ಮವನೇ ಎಂದು ಹೇಳಿಕೆ ನೀಡುವ ಮೂಲಕ ಪಾಕ್‌ನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.
ಮುಂಬೈ ದಾಳಿಯಲ್ಲಿ ಪಾಕ್ ಪ್ರಜೆಯೇ ಶಾಮೀಲಾಗಿದ್ದಾರೆ ಎಂಬುದಕ್ಕೆ ಯಾವುದೇ ಬಲವಾದ ಪುರಾವೆ ಇಲ್ಲದೇ ಒಪ್ಪಿಕೊಂಡ ಬಗ್ಗೆ ಹೇಳಿಕೆಯನ್ನು ಸರಿಯಾಗಿ ಪರಿಶೀಲಿಸದೆ ನೀಡಲಾಗಿದೆ ಎಂದು ಒಪ್ಪಿಸಲು ದುರಾನಿ ವಿರುದ್ಧ ಹಕ್ಕಾನಿ ಹಾಗೂ ರೆಹಮಾನ್ ಸೇರಿದಂತೆ ತಂಡವೊಂದು ಕಳೆದ ಕೆಲವು ವಾರಗಳಿಂದ ಒತ್ತಡ ಹೇರುತ್ತಿರುವುದಾಗಿ ವರದಿಯೊಂದು ಹೇಳಿದೆ.
ಅದಕ್ಕೆ ಪ್ರಾಯಶ್ಚಿತ್ತ ಎನ್ನುವಂತೆ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರು, ದುರಾನಿ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆಯಿಂದ ವಜಾಗೊಳಿಸಿದ್ದರು.
ದುರಾನಿ ಅವರು ಪಾಕ್‌ನಲ್ಲಿಯೇ ಇದ್ದು, ಅಮೆರಿಕ ಮತ್ತು ಭಾರತ ದೇಶದ ಹಿತಾಸಕ್ತಿಗೆ ಅನುಗುಣವಾಗಿ ವರ್ತಿಸುತ್ತಿದ್ದಾರೆ ಎಂದು ಹುಸೈನ್ ಹಕ್ಕಾನಿ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಶೆರ್ರಿ ರೆಹಮಾನ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
|