ಅಮೆರಿಕದಲ್ಲಿ ಮ್ಯಾಡಾಫ್ ಎಂಬ ವಂಚಕ ನಡೆಸಿದ ಮಹಾಮೋಸದ ಬಿಸಿ ಕೇವಲ ಶ್ರೀಮಂತರಿಗೆ ಮಾತ್ರ ತಟ್ಟಿದ್ದಲ್ಲ ಅದು ಜನಸಾಮಾನ್ಯರನ್ನು ಕೂಡ ನಡು ಬೀದಿಗೆ ತಂದು ನಿಲ್ಲಿಸಿದ್ದು, ಇದೀಗ ಬದುಕಲು ಪರದಾಡುವಂತ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.
ದೇಶ ಆರ್ಥಿಕ ದಿವಾಳಿಯಿಂದ ಎಕ್ಕುಟ್ಟಿ ಹೋಗಿದೆ ಎಂಬ ಸುದ್ದಿ ಹಬ್ಬುತ್ತಿರುವಂತೆಯೇ ಚಾನ್ ಪ್ರೊಸ್ಟ್ ಎಂಬಾಕೆ ತನ್ನ ಕ್ರೆಡಿಟ್ ಕಾರ್ಡ್ ಹಿಡಿದು ಉಳಿದ ಹಣವನ್ನೆಲ್ಲ ತೆಗೆದು, ತನ್ನಿಬ್ಬರು ಮಕ್ಕಳಿಗಾಗಿ ತಿಂಡಿ-ತಿನಿಸುಗಳನ್ನು ತಂದಿದ್ದಳು.
ಆಕೆ ಬದುಕು ಸಾಗಿಸಲು ಮತ್ತೊಂದು ಅರೆಕಾಲಿಕ ಉದ್ಯೋಗ ಮಾಡಬೇಕಾದ ಸ್ಥಿತಿ ಬಂದಿದೆ. ವಾರದ ಕೆಲವು ದಿನ ಪಿಜ್ಜಾಗಳನ್ನು ಮಾರಾಟ ಮಾಡುತ್ತಾಳೆ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿಯೂ ಕರ್ತವ್ಯ ನಿರ್ವಹಿಸುತ್ತಾಳೆ ಆದರೂ ಆಕೆಗೆ ತಿಂಗಳಿಗೆ ಸಿಗುವುದು 2,200ಡಾಲರ್ ಹಣ.
ಸದ್ಯದ ಸ್ಥಿತಿಯಲ್ಲಿ ದೇಶದ ಆರ್ಥಿಕ ದಿವಾಳಿತನ ನಮ್ಮನ್ನು ತುಂಬಾ ನೋಯಿಸಿರುವುದಲ್ಲದೆ,ದುರ್ಗತಿಗೆ ದೂಡಿದೆ ಎಂಬುದು 32ರ ಹರೆಯದ ಪ್ರೊಸ್ಟ್ ಅಳಲು.
ಇದು ಕೇವಲ ಪ್ರೊಸ್ಟ್ ರೋದನವಲ್ಲ, ಅಮೆರಿಕದಲ್ಲಿರುವ ಲಕ್ಷಾಂತರ ಜನಸಾಮಾನ್ಯರ ಅಳಲಾಗಿದೆ. 2007ರ ಅಂಕಿ-ಅಂಶಗಳ ಪ್ರಕಾರ 37.3ಮಿಲಿಯನ್ ಅಮೆರಿಕನ್ನರು ಬಡತನರೇಖೆಯಲ್ಲಿ ಬದುಕುತ್ತಿರುವುದಾಗಿ ತಿಳಿಸಿದೆ. ಅಂದರೆ ಅಮೆರಿಕ ಜನಸಂಖ್ಯೆಯ ಶೇ.12.5ರಷ್ಟು ಜನ ಬಡವರು.
ಆ ನೆಲೆಯಲ್ಲಿ ಏಕಾಏಕಿ ಬಂದೆರಗಿದ ಆರ್ಥಿಕ ದಿವಾಳಿತನ ಈ ವರ್ಷದಲ್ಲಿ ಪ್ರೊಸ್ಟ್‌ಳಂತೆ ಲಕ್ಷಾಂತರ ಮಂದಿ ಬಡತನದಲ್ಲಿಯೇ ಜೀವನ ಸಾಗಿಸುವಂತಾಗಿದ್ದಲ್ಲದೆ, ಅವರೆಲ್ಲರಿಗೂ ಆರ್ಥಿಕ ಹೊಡೆತ ಬಲವಾಗಿ ತಟ್ಟಿದೆ ಎಂದು ಆರ್ಥಿಕ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಮೆಡಾಫ್ ಮಹಾಮೋಸದಿಂದ ಮಧ್ಯಮ ವರ್ಗದ ಜನರು ಬಡತನದಿಂದ ಮತ್ತಷ್ಟು ಕೆಳ ಕುಸಿಯುವಂತಾಗಿದೆ. ಅವೆರಲ್ಲ ಮಕ್ಕಳ ವಿದ್ಯಾಭ್ಯಾಸ ಸಾಲ, ಕಾರು ಸಾಲ ತೀರಿಸಲು ಹೆಣಗಾಡಬೇಕಾದಂತಹ ಸ್ಥಿತಿ ಬಂದೊದಗಿದೆ.
|