ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾದ ಶಂಕಿತ ಉಗ್ರರ ವಿರುದ್ಧ ದೇಶದ ಕಾನೂನಿನ್ವಯ ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ ಪಾಕಿಸ್ತಾನ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರು ಭಾರತಕ್ಕೆ ಭರವಸೆ ನೀಡಿದ್ದಾರೆ.
ಪಾಕ್‌ಗೆ ಭೇಟಿ ನೀಡಿದ್ದ ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಮಿಲಿಬಾಂಡ್ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಭರವಸೆ ನೀಡಿದ್ದು, ಮುಂಬೈ ಘಟನೆ ಕುರಿತಂತೆ ಸರ್ಕಾರ ಪ್ರಾಥಮಿಕ ತನಿಖೆಯನ್ನು ಆರಂಭಿಸಿರುವುದಾಗಿ ಹೇಳಿದ್ದಾರೆ.
ಮುಂಬೈ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ದಿನಕ್ಕೊಂದು ರಾಗ ಬದಲಿಸುತ್ತಿದ್ದ ಪಾಕ್, ಕೊನೆಗೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿದ್ದು, ನಿಷ್ಪಕ್ಷಪಾತ ಹಾಗೂ ಸೂಕ್ತ ತನಿಖೆ ನಡೆಸುವುದಾಗಿ ಅಧಿಕೃತವಾಗಿ ಪ್ರಕಟಣೆಯಲ್ಲಿ ವಿವರಿಸಿದೆ.
ಅಲ್ಲದೇ ನಿಷ್ಪಕ್ಷಪಾತ ಜಂಟಿ ತನಿಖೆಗೆಗೆ ಭಾರತದ ಪೂರ್ಣ ಪ್ರಮಾಣದ ಸಹಕಾರವನ್ನು ಪಾಕಿಸ್ತಾನ ನಿರೀಕ್ಷಿಸುತ್ತದೆ ಎಂದು ಕೂಡ ಗಿಲಾನಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಜಮಾದ್ ಉದ್ ದವಾ ಮೇಲೆ ವಿಶ್ವಸಂಸ್ಥೆ ಭದ್ರತಾ ಸಂಸ್ಥೆ ಹೇರಿರುವ ಷರತ್ತು ಮತ್ತು ಮುಂಬೈ ದಾಳಿ ಕುರಿತಂತೆ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಮಿಲಿಬಾಂದ್ ಅವರಿಗೆ ವಿವರ ನೀಡಿರುವುದಾಗಿ ಗಿಲಾನಿ ತಿಳಿಸಿದ್ದಾರೆ.
ತನಿಖೆ ಅಂತಿಮಗೊಂಡ ನಂತರ ಅದರ ವಿವರಗಳನ್ನು ಭಾರತ ಹಾಗೂ ಉಳಿದ ದೇಶಗಳೊಂದಿಗೆ ವಿನಿಮಯ ಮಾಡಿಕೊಳ್ಳಲಾಗುವುದು ಎಂದರು. |