ಭಾರತದ ಪ್ರಮುಖ ವಿವಾದಿತ ಕೇಂದ್ರ ಬಿಂದುವಾಗಿರುವ ಜಮ್ಮು-ಕಾಶ್ಮೀರ ಒಂದು 'ಹಾಟ್ ಸ್ಪಾಟ್' ಆಗಿರುವುದಾಗಿ ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿಯಾಗಿರುವ ಸುಸಾನ್ ರೈಸ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಆ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಪಟ್ಟ ಏರಲಿರುವ ಬರಾಕ್ ಒಬಾಮ ಅವರ ಆಡಳಿತ ಯಾವ ತೆರನಾಗಿ ಪರಿಗಣಿಸಲಿದೆ ಎಂಬುದರ ಸೂಚನೆಯಾಗಿದೆ.
ಬಾಲ್ಕನ್ಸ್‌ನಿಂದ ಪೂರ್ವ ತೈಮೂರ್, ಲಿಬೆರಿಯಾದಿಂದ ಕಾಶ್ಮೀರ, ಸೈಪ್ರಸ್‌ನಿಂದ ಗೋಲನ್ ಹೈಟ್ಸ್‌ವರೆಗೆ ಕಳೆದ ಆರುವತ್ತು ವರ್ಷಗಳಿಂದ ನಡೆಯುತ್ತಿರುವ ಸಂಘರ್ಷದ ಬಿಕ್ಕಟ್ಟು ಪರಿಹರಿಸಲು ವಿಶ್ವಸಂಸ್ಥೆ ಸಹಾಯ ಹಸ್ತ ಚಾಚಿದೆ,ಸಮರದತ್ತ ಹೊರಳುತ್ತಿದ್ದ ಆ ದೇಶಗಳನ್ನು ಒಂದು ಹಂತಕ್ಕೆ ತರಲಾಗಿದೆ. ಆ ನೆಲೆಯಲ್ಲಿ ಮಾನವೀಯ ಸಹಾಯ, ಚುನಾವಣೆ ವ್ಯವಸ್ಥೆ ಹಾಗೂ ಶಾಂತಿ ಮತ್ತು ರಕ್ಷಣೆಯನ್ನು ನೀಡಲಾಗಿತ್ತು ಎಂದು ರೈಸ್ ವಿವರಿಸಿದ್ದಾರೆ.
ಜಮ್ಮು-ಕಾಶ್ಮೀರ ಪ್ರಪಂಚದಲ್ಲಿನ ಅತ್ಯಂತ ತೀವ್ರ ಬಿಕ್ಕಟ್ಟಿನ ಪ್ರದೇಶ ಎಂಬುದಾಗಿ ಈ ಮೊದಲೇ ರೈಸ್ ಅವರು ಬೊಟ್ಟು ಮಾಡಿ ಹೇಳಿದ್ದರು.
ಸುಸಾನ್ ರೈಸ್ ಅವರು, ಕ್ಲಿಂಟನ್ ಆಡಳಿತಾವಧಿಯಲ್ಲಿ ಆಫ್ರಿಕಾದ ಸಹಾಯಕ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಬರಾಕ್ ಅವರ ಚುನಾವಣಾ ಪ್ರಚಾರ ಸಂದರ್ಭದಲ್ಲಿ ವಿದೇಶಾಂಗ ನೀತಿಯ ಸಲಹೆಗಾರರು ಆಗಿದ್ದರು. ನವೆಂಬರ್ 04ರಂದು ನಡೆದ ಚುನಾವಣೆಯಲ್ಲಿ ಬರಾಕ್ ಜಯಭೇರಿ ಬಾರಿಸಿದ ನಂತರ, ಒಬಾಮ ಅವರು ರೈಸ್ ಅವರನ್ನು ವಿಶ್ವಸಂಸ್ಥೆಯಲ್ಲಿ ಕ್ಯಾಬಿನೆಟ್ ದರ್ಜೆಯೊಂದಿಗೆ ಅಮೆರಿಕದ ರಾಯಭಾರಿಯನ್ನಾಗಿ ನೇಮಕ ಮಾಡಿದ್ದಾರೆ. |