ಅಮೆರಿಕದ ಅಧ್ಯಕ್ಷರಾಗಿ ಜನವರಿ 20ರಂದು ಬರಾಕ್ ಒಬಾಮ ಅವರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಹತ್ಯೆಗೈಯುವುದಾಗಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವುದಾಗಿ ಅಮೆರಿಕ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮ ವಿರುದ್ಧದ ಕೊಲೆ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಅಮೆರಿಕದ ಅಟಾರ್ನಿ ಡುನ್ನ್ ಲಾಂಪ್ಟನ್ ಹೇಳಿದ್ದಾರೆ.
ಆ ನಿಟ್ಟಿನಲ್ಲಿ ವಿಸ್‌ಕಾನ್‌ಸಿನ್‌ನ ನಗರದ ಸ್ಟೀವನ್ ಜೋಸೆಫ್ ಕ್ರಿಸ್ಟೋಫರ್ ಎಂಬಾತನನ್ನು ಅಮೆರಿಕದ ಗುಪ್ತಚರ ಸಂಸ್ಥೆ ಶುಕ್ರವಾರ ಸೆರೆ ಹಿಡಿದಿರುವುದಾಗಿ ತಿಳಿಸಿದೆ. ಈತ ಇಂಟರ್‌ನೆಟ್ ಚಾಟ್‌ರೂಮ್‌ನಿಂದ ಬರಾಕ್ ವಿರುದ್ಧ ಕೆಟ್ಟ ಶಬ್ಬ ಬಳಸಿ, ಕೊಲೆಗೈಯುವ ಬೆದರಿಕೆ ಒಡ್ಡಿರುವ ಇ-ಮೇಲ್ ಕಳುಹಿಸಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಅಧ್ಯಕ್ಷ ಬರಾಕ್ ಅವರ ಹತ್ಯಾ ಪ್ರಯತ್ನದ ಬೆದರಿಕೆ ಅಪರಾಧವಾಗಿದ್ದು, ಒಂದು ವೇಳೆ ಆರೋಪ ಖಚಿತಪಟ್ಟಲ್ಲಿ ಆತನಿಗೆ ಕನಿಷ್ಠ 5ವರ್ಷಗಳ ಜೈಲು ಹಾಗೂ 250,000ಡಾಲರ್ ದಂಡ ವಿಧಿಸಲಾಗುತ್ತದೆ.
'ಬರಾಕ್ ಒಬಾಮ ಅವರನ್ನು ಕೊಲ್ಲಲು ನಾನು ಈಗಾಗಲೇ ನಿರ್ಧರಿಸಿಯಾಗಿದೆ, ಇದು ನನ್ನ ವೈಯಕ್ತಿಕ ಹಠವಲ್ಲ, ಆದರೆ ಬರಾಕ್ ಹತ್ಯೆಯಿಂದ ದೇಶಕ್ಕೆ ಒಳ್ಳೆಯದಾಗಲಿದೆ ಎಂಬುದು ತನಗೆ ಗೊತ್ತು' ಎಂಬುದಾಗಿ ಕ್ರಿಸ್ಟೋಫರ್ ಜನವರಿ 11ರಂದು ವೆಬ್‌ಸೈಟ್‌ವೊಂದರಲ್ಲಿ ಬರೆದುಕೊಂಡಿದ್ದ. |