ಮುಂಬೈ ದಾಳಿಗೆ ಸಂಬಂಧಿಸಿದಂತೆ ಭಾರತ ನೀಡಿರುವ ಪುರಾವೆಗಳು ನಂಬಿಕಾರ್ಹವಾಗಿವೆ ಎನ್ನುವ ಮೂಲಕ ಪಾಕಿಸ್ತಾನ ಕೊನೆಗೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿಯುವುದರೊಂದಿಗೆ ಭಾರತದ ಪ್ರಯತ್ನಕ್ಕೆ ಕೊಂಚಮಟ್ಟಿನ ಯಶ ದೊರೆತಂತಾಗಿದೆ.
ದಾಳಿ ಕುರಿತಂತೆ ಪಾಕಿಸ್ತಾನದಲ್ಲಿ ಈವರೆಗೆ ಯಾವುದೇ ಮೊಕದ್ದಮೆ ದಾಖಲಾಗಿಲ್ಲ. ಭಾರತ ಸಾಕಷ್ಟು ಸಾಮಗ್ರಿ ಒದಗಿಸಿದೆ. ಅದರಲ್ಲಿ ಪ್ರಮುಖ ಅಂಶಗಳು ಮತ್ತು ಉತ್ತಮ ಸುಳಿವುಗಳಿವೆ. ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳು ಕಂಡು ಬಂದು ಅವು ದಾಖಲೆ ರೂಪದಲ್ಲಿ ಲಭ್ಯವಾದ ಬಳಿಕ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಮುಕ್ತ ಹಾಗೂ ನ್ಯಾಯಸಮ್ಮತ ತನಿಖೆ ನಡೆಸುತ್ತೇವೆ ಎಂದು ಆಂತರಿಕ ವ್ಯವಹಾರಗಳ ಸಚಿವ ರೆಗಮಾನ್ ಮಲ್ಲಿಕ್ ಸುದ್ದಿಗೋಷ್ಠಿಯಲ್ಲಿ ಶನಿವಾರ ಭಾರತ ಮತ್ತು ವಿಶ್ವ ಸಮುದಾಯಕ್ಕೆ ಭರವರೆ ನೀಡಿದ್ದಾರೆ.
ಭಯೋತ್ಪಾದನೆ ನಿಗ್ರಹ ದಳದ ಮೂವರು ಸಮರ್ಥ ಅಧಿಕಾರಿಗಳನ್ನು ಒಳಗೊಂಡ ತಂಡ ಈ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸುತ್ತಿದೆ. ಜೊತೆಗೆ ನಮ್ಮ ನೆಲದ ನ್ಯಾಯಾಂಗ ವ್ಯವಸ್ಥೆಗೆ ಪೂರಕವಾಗಿ ಇನ್ನಷ್ಟು ಪುರಾವೆಗಳನ್ನು ಅದು ಸಂಗ್ರಹಿಸಲಿದೆ. ಕಾನೂನು ಕ್ರಮಕ್ಕೆ ಅನುವಾಗುವಂತೆ ಭಾರತದ ಸಾಮಗ್ರಿಗಳನ್ನು ಸಾಕ್ಷ್ಯಾಧಾರಗಳನ್ನಾಗಿ ಪರಿವರ್ತಿಸಿ, ಕಾನೂನುಬದ್ದ ತನಿಖೆ ನಡೆಸುವಂತೆ ಸೂಚಿಸಿದ್ದೇವೆ. ಪ್ರಾಥಮಿಕ ತನಿಖಾ ಅಂಶಗಳನ್ನು ತಂಡ 10ದಿನದೊಳಗೆ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಮಾಹಿತಿ ನೀಡಿದ್ದಾರೆ. |