ಮುಂಬೈ ದಾಳಿಯಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ದಸ್ತಗಿರಿ ಮಾಡಲಾಗುವುದು ಎಂದು ಪಾಕಿಸ್ತಾನ ಭಾನುವಾರ ತಿಳಿಸಿದ್ದು, ಅಲ್ಲದೇ ತಮ್ಮ ತನಿಖೆಗೆ ಸಹಕರಿಸುವುದಾಗಿ ಹೇಳಿರುವ ಭಾರತದ ನಿಲುವು ಸ್ವಾಗತಾರ್ಹ ಎಂದು ಹೇಳಿದೆ.
ಪಾಕ್ ಆಂತರಿಕ ಸಚಿವಾಲಯದ ವರಿಷ್ಠ ರೆಹಮಾನ್ ಮಲಿಕ್ ಸುದ್ದಿಗಾರರೊಂದಿಗೆ ಮಾತನಾಡುತ್ತ, 26/11ರ ಪೈಶಾಚಿಕ ದಾಳಿಯನ್ನು ನಡೆಸಿದಂತಹ ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ ಅವರಿಗೆ ದೇಶದ ಭಯೋತ್ಪಾದನಾ ನಿಗ್ರಹ ಕಾಯ್ದೆಯನ್ವಯ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕಳೆದ ಕೆಲವು ದಿನಗಳವರೆಗೆ ಮುಂಬೈ ದಾಳಿಗೆ ಸಂಬಂಧಿಸಿದಂತೆ ಇಬ್ಬಗೆ ನೀತಿ ಅನುಸರಿಸುತ್ತಿದ್ದ ಪಾಕಿಸ್ತಾನ, ಕೊನೆಗೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿಯುವ ಮೂಲಕ ಭಾರತದ ಪ್ರಯತ್ನಕ್ಕೆ ಯಶ ದೊರೆಯುವಂತಾಗಿದ್ದು, ಭಾರತ ನೀಡಿರುವ ಪುರಾವೆ ನಂಬಲರ್ಹ ಎಂದು ಶನಿವಾರವಷ್ಟೇ ಪಾಕ್ ಅಭಿಪ್ರಾಯ ವ್ಯಕ್ತಪಡಿಸಿತ್ತು. |