ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಿಂದ ಭಾರತದ ಮೇಲೆ ಮುಂಬೈ ಮಾದರಿಯ ದಾಳಿಗಳು ನಡೆಯುವ ಸಾಧ್ಯತೆ ಇರುವುದಾಗಿ ಅಮೆರಿಕದ ಚಿಂತಕರ ಕೂಟ ಎಚ್ಚರಿಕೆ ನೀಡಿದೆ.
ಪಾಕ್ ಮೂಲದ ಉಗ್ರಗಾಮಿ ಸಂಘಟನೆಯಿಂದ ಭಾರತ ಗಂಭೀರ ತೆರನಾದ ಜಿಹಾದ್ ಬೆದರಿಕೆಯನ್ನು ಎದುರಿಸಲಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಕೂಡ ಮತ್ತಷ್ಟು ತೊಡಕಿಗೆ ಕಾರಣವಾಗಲಿದೆ ಎಂದು ಹಿರಿಯ ರಾಜಕೀಯ ವಿಶ್ಲೇಷಕಿ ಏಂಜೆಲ್ ರಬಾಸಾ ಅವರು ತಮ್ಮ ಅಧ್ಯಯನ ವರದಿಯಲ್ಲಿ ತಿಳಿಸಿದ್ದಾರೆ.
ರಾಂಡ್ ಕಾರ್ಪೋರೇಶನ್ ಜತೆಗೂಡಿ ನಡೆಸಿದ ಸಂಶೋಧನಾ ವರದಿಯನ್ವಯ, ಪಾಕಿಸ್ತಾನದಲ್ಲಿರುವ ವಿವಿಧ ಉಗ್ರಗಾಮಿ ಗುಂಪುಗಳು ಕೂಡ ಮುಂಬೈ ದಾಳಿಯಿಂದ ಉತ್ತೇಜನ ಪಡೆದಿದ್ದು, ಅದೇ ತೆರನಾದ ಮತ್ತಷ್ಟು ದಾಳಿಗಳನ್ನು ನಡೆಸುವ ಸಾಧ್ಯತೆ ಇದೆ ಎಂಬ ಆತಂಕವನ್ನು ವ್ಯಕ್ತಪಡಿಸಿದೆ.
ಮುಂಬೈ ದೇಶದ ವಾಣಿಜ್ಯ ಮತ್ತು ಸಾಂಸ್ಕೃತಿಕ ನಗರವಾಗಿದ್ದು, ಆ ಮೂಲಕ ಭಯೋತ್ಪಾದಕರು ದಾಳಿ ನಡೆಸುವ ಗುರಿಯನ್ನು ಹೊಂದಿದ್ದಾರೆ. ಹಾಗೇ ದಾಳಿ ನಡೆಸುವ ಮೂಲಕ ಮಾನಸಿಕ ಆಘಾತವನ್ನು ನೀಡುವುದು ಉಗ್ರರ ಪ್ರಮುಖ ಧ್ಯೇಯ ಎಂದು ವರದಿ ವಿವರಿಸಿದೆ. |