ಬರಾಕ್ ಒಬಾಮ ಜನವರಿ 20ರಂದು ಅಧ್ಯಕ್ಷಗಾದಿ ಏರಿದ ನಂತರ,21ರಂದು ನಡೆಯಲಿರುವ ರಾಷ್ಟ್ರೀಯ ಪ್ರಾರ್ಥನಾ ಕಾರ್ಯಕ್ರಮ ನೆರವೇರಿಸಲು ಹಿಂದು ಮಹಿಳಾ ಪುರೋಹಿತೆ ಸೇರಿದಂತೆ ಒಟ್ಟು ಆರು ಮಂದಿಗೆ ವಿಶೇಷ ಆಹ್ವಾನ ನೀಡಲಾಗಿದೆ.
ಉತ್ತರ ಅಮೆರಿಕ ಹಿಂದೂ ದೇವಾಲಯ ಸಂಘಟನೆಗಳ ಅಧ್ಯಕ್ಷರಾಗಿರುವ ಡಾ.ಉಮಾ ಮೈಸೂರ್‌ಕರ್ ಅವರನ್ನು ಪ್ರಾರ್ಥನೆ ಕಾರ್ಯಕ್ರಮ ನೆರವೇರಿಸಿಕೊಡಲು ಆಹ್ವಾನ ನೀಡಲಾಗಿದೆ ಎಂದು ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಸಮಿತಿ ತಿಳಿಸಿದೆ. ಈ ಪ್ರಾರ್ಥನೆ ಅಮೆರಿಕದ ಧಾರ್ಮಿಕ ಸಹಿಷ್ಣುತೆ ಹಾಗೂ ಸ್ವಾತಂತ್ರ್ಯದ ಪ್ರತೀಕವಾಗಿದೆ ಎಂದು ಸಮಿತಿ ವಿವರಿಸಿದೆ.
ಡಾ.ಉಮಾ ಅವರು ಸ್ತ್ರೀರೋಗ ತಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ನ್ಯೂಯಾರ್ಕ್‌ನಲ್ಲಿರುವ ಗಣೇಶ ದೇವಾಲಯದ ವರಿಷ್ಠರಾಗಿದ್ದಾರೆ.
ಜಾರ್ಜ್ ವಾಷಿಂಗ್ಟನ್‌ನಲ್ಲಿ ಸಾಂಪ್ರದಾಯಿಕ ರಾಷ್ಟ್ರೀಯ ಪ್ರಾರ್ಥನಾ ಸಮಾರಂಭ ನಡೆಯಲಿದೆ. ಇದನ್ನು ನ್ಯಾಷನಲ್ ಕ್ಯಾಥೆಡ್ರೆಲ್ ಆಯೋಜಿಸಿದೆ. ಪ್ರಾರ್ಥನಾ ಸೇವೆಯಲ್ಲಿ ವಿವಿಧ ಧಾರ್ಮಿಕ ಮುಖಂಡರಿಂದ ಧರ್ಮಗ್ರಂಥ ಪಠಣ, ಪ್ರಾರ್ಥನೆ, ಭಜನೆ ಹಾಗೂ ಆಶೀರ್ವಾದ ನಡೆಯಲಿದೆ. |