ಪಾಕ್ ನೆಲದ ಉಗ್ರರಿಂದ ಮುಂಬೈ ಮೇಲೆ ನಡೆದಿರುವ ಭಯೋತ್ಪಾದನಾ ದಾಳಿ ಕುರಿತಂತೆ ಭಾರತ ಪುರಾವೆಗಳನ್ನು ಹಸ್ತಾಂತರಿಸಿದ ಬಳಿಕ ಏನು ಕ್ರಮ ಕೈಗೊಂಡಿದೆ ಎಂಬ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಪಾಕ್ ಆ ಕುರಿತು ಸೋಮವಾರ ವಿದೇಶಿ ರಾಯಭಾರಿಗಳಿಗೆ ವಿವರಣೆಯನ್ನು ನೀಡಲಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಹಾಗೂ ಆಂತರಿಕ ಸಲಹೆಗಾರ ರೆಹಮಾನ್ ಮಲಿಕ್ ಕೂಡ ದಾಳಿ ತನಿಖೆಯ ವಿವರಣೆ ನೀಡಲಿದ್ದಾರೆಂದು ಜಿಯೋ ಟಿವಿ ವರದಿ ಹೇಳಿದೆ. ಆದರೆ ಈ ವಿದೇಶಿ ರಾಯಭಾರಿಗಳಲ್ಲಿ ಭಾರತೀಯ ರಾಯಭಾರಿ ಸೇರಿಲ್ಲ ಎನ್ನುವುದು ಮತ್ತೊಂದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.
ವಿಶ್ವಸಂಸ್ಥೆ ವಿವಿಧ ಉಗ್ರಗಾಮಿ ಸಂಘಟನೆ ಮೇಲೆ ಹೇರಿದ್ದ ನಿಷೇಧ ಹಾಗೂ ಮುಂಬೈ ದಾಳಿ ಕುರಿತಂತೆ ಕೈಗೊಂಡ ಕ್ರಮ, ತನಿಖೆಯ ಕುರಿತು ವಿದೇಶಾಂಗ ರಾಯಭಾರಿಗಳು ಬಹಿರಂಗಪಡಿಸಲಿದ್ದಾರೆ.
ಅಲ್ಲದೇ ಮುಂಬೈ ದಾಳಿ ಕಾರಣಕರ್ತರಾದ ಎಲ್ಲಾ ಆರೋಪಿಗಳನ್ನು ದಸ್ತಗಿರಿ ಮಾಡಲಾಗುವುದು ಎಂದು ಪಾಕಿಸ್ತಾನ ಭಾನುವಾರ ಅಭಿಪ್ರಾಯ ವ್ಯಕ್ತಪಡಿಸಿ, ಪಾಕ್‌ಗೆ ಸಹಕಾರ ನೀಡಿರುವುದಾಗಿ ಹೇಳಿರುವ ಭಾರತ ನಿಲುವು ಸ್ವಾಗತಾರ್ಹ ಎಂಬುದಾಗಿ ತಿಳಿಸಿತ್ತು.
ಏತನ್ಮಧ್ಯೆ ಪಾಕಿಸ್ತಾನದ ಮೇಲಿನ ಒತ್ತಡವನ್ನು ಮುಂದುವರಿಸಿರುವುದಾಗಿ ಹೇಳಿರುವ ಭಾರತ, ದಾಳಿ ಸಂದರ್ಭದಲ್ಲಿ ಸೆರೆಸಿಕ್ಕ ಏಕೈಕ ಉಗ್ರ ಕಸಬ್‌ನ ಡಿಎನ್‌ಎ ಸ್ಯಾಂಪಲ್ ಅನ್ನು ಎರಡನೇ ಹಂತದ ಪುರಾವೆಯನ್ನಾಗಿ ಪಾಕ್‌ಗೆ ಕಳುಹಿಸಲಾಗುವುದು ಎಂದು ಭಾರತ ಹೇಳಿದೆ. |