ಮುಸ್ಲಿಂ ಸಮುದಾಯಕ್ಕೆ ಫತ್ವಾ ಏಕಮಾತ್ರ ನಿರ್ದೇಶನ ಸೂತ್ರವಲ್ಲ, ಮಾಧ್ಯಮ ಮತ್ತು ಸಂಸ್ಕೃತಿಯಂತಹ ಇತರ ಅಂಶಗಳೂ ಸಹ ಅವರ ಕ್ರಿಯೆಯ ಮೇಲೆ ಪ್ರಭಾವ ಬೀರಬಹುದು ಎಂಬುದಾಗಿ ಪ್ರಮುಖ ಸೌದಿ ವಿದ್ವಾಂಸರೊಬ್ಬರು ಹೇಳಿದ್ದಾರೆ.
ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಫತ್ವಾವು ಮಾಧ್ಯಮ, ರಾಜಕೀಯ ಮತ್ತು ಚಿಂತನಾ ನಾಯಕರೊಂದಿಗೆ ಸಂಪೂರ್ಣ ಸೌಹಾರ್ದದೊಂದಿಗೆ ಜತೆಜತೆಗೆ ಕಾರ್ಯನಿರ್ವಹಿಸಬೇಕಾಗಿದೆ ಎಂದು ವಿದ್ವಾಂಸ ಶೇಕ್ ಸಲ್ಮಾನ್ ಅಲ್-ಔದ್ ಹೇಳಿದ್ದಾರೆ.
ಮೆಕ್ಕಾದಲ್ಲಿ ನಡೆದ ಫತ್ವಾ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನದ ಪಾರ್ಶ್ವದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಸಮ್ಮೇಳನವನ್ನು ರಾಜಕುಮಾರ್ ಖಾಲಿದ್ ಅಲ್-ಫೈಸಲ್ ಉದ್ಘಾಟಿಸಿದರು.
ಮೆಕ್ಕಾ ಮೂಲದ ಮುಸ್ಲಿಂ ವರ್ಲ್ಡ್ ಲೀಗ್‌ನ ಫಿಕ್ ಆಕಾಡೆಮಿ ಸಂಘಟಿಸಿರುವ ಐದು ದಿನಗಳ ಈ ಸಮ್ಮೇಳನದಲ್ಲಿ 170ಕ್ಕೂ ಅಧಿಕ ವಿದ್ವಾಂಸರು ಭಾಗವಹಿಸಿದ್ದಾರೆ.
ಔಷಧಿಯ, ಮಾಧ್ಯಮ, ಆರ್ಥಿಕ ಹಾಗೂ ಇತರ ರಂಗಗಳಲ್ಲಿನ ಹೊಸ ಸಮಸ್ಯೆಗಳು ಹಾಗು ಇತರ ವಿಚಾರಗಳ ಕುರಿತು ಚರ್ಚಿಸಲು ಇಂತಹ ಸಮ್ಮೇಳನಗಳನ್ನು ಹಮ್ಮಿಕೊಳ್ಳಬೇಕು ಎಂದು ಅಲ್-ಔದ್ ಕರೆ ನೀಡಿದರು.
ಫತ್ವಾ ಹೊರಡಿಸುವುದು ವಿದ್ವಾಂಸರ ಕರ್ತವ್ಯ ಎಂಬುದು ಸಮ್ಮೇಳನದಲ್ಲಿ ಭಾಗವಹಿಸಿದ್ದ ಎಲ್ಲರ ಅವಿರೋಧ ಅಭಿಪ್ರಾಯವಾಗಿದೆ. ಈ ಫತ್ವಾಗಳು ಇಸ್ಲಾಮಿನ ನಂಬುಗೆ ಸಿದ್ಧಾಂತಗಳಿಗೆ ಅನುಗುಣವಾಗಿರಬೇಕು ಎಂಬುದಾಗಿಯೂ ಅಭಿಪ್ರಾಯಿಸಲಾಗಿದೆ.
ಫತ್ವಾವು ಜೀವನದ ಬದಲಾವಣೆಯ ನಡೆಯೊಂದಿಗೆ ಹೆಜ್ಜೆ ಹಾಕಬೇಕು ಎಂಬುದಾಗಿಯೂ ವಿದ್ವಾಂಸರು ನಿರ್ಧರಿಸಿದ್ದಾರೆ. |