ಗಾಜಾಪಟ್ಟಿ ಮೇಲೆ ಕಳೆದ 22ದಿನಗಳಿಂದ ನಡೆಸುತ್ತಿದ್ದ ಕದನಕ್ಕೆ ಇಸ್ರೇಲ್ ಭಾನುವಾರ ವಿರಾಮ ಘೋಷಿಸಿದ ಬೆನ್ನಲ್ಲೇ, ಹಮಾಸ್ ಸಂಘಟನೆ ಕೂಡ ಸಮರ ನಿಲ್ಲಿಸಿದೆ. ಆದರೆ ಇಸ್ರೇಲ್ ಪಡೆ ವಾರದೊಳಗೆ ವಾಪಸು ತೆರಳಬೇಕು ಎಂದು ಹಮಾಸ್ ಷರತ್ತಿನ ಕದನ ವಿರಾಮ ಘೋಷಿಸಿದೆ.
22ದಿನಗಳ ಕಾಲ ಪ್ಯಾಲೆಸ್ತೇನ್‌ನ ಗಾಜಾಪಟ್ಟಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಒಟ್ಟು 1200 ಜನರು ಬಲಿಯಾಗಿದ್ದರು. ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಯುದ್ದ ನಿಲ್ಲಿಸಲು ಮನವಿ ಮಾಡಿಕೊಂಡಿದ್ದರು ಕೂಡ ಇಸ್ರೇಲ್ ಅದನ್ನು ನಿರಾಕರಿಸಿತ್ತು. ಏತನ್ಮಧ್ಯೆ ಇಸ್ರೇಲ್ ಭಾನುವಾರ ಏಕಪಕ್ಷೀಯ ನಿರ್ಧಾರದೊಂದಿಗೆ ಗಾಜಾ ಮೇಲಿನ ಕದನಕ್ಕೆ ವಿರಾಮ ಹೇಳಿದೆ.
ಗಾಜಾದಲ್ಲಿನ ಎಲ್ಲಾ ಇಸ್ರೇಲ್ ಪಡೆಯನ್ನು ವಾಪಸು ಕರೆಯಿಸಿಕೊಳ್ಳಬೇಕೆಂದು ಷರತ್ತು ವಿಧಿಸಿರುವ ಹಮಾಸ್ ಇಸ್ರೇಲ್ ಭಾಗದ ಮೇಲೆ ಭಾನುವಾರ ರಾಕೆಟ್ ದಾಳಿ ನಡೆಸಿತ್ತು.
ಗಾಜಾ ಮೇಲಿನ ಕದನ ವಿರಾಮ ಘೋಷಿಸಿದ ನಿಲುವನ್ನು ವಿಶ್ವಸಂಸ್ಥೆ, ಅಮೆರಿಕ ಸೇರಿದಂತೆ ಜಾಗತಿಕವಾಗಿ ಬಹುತೇಕ ದೇಶಗಳು ಸ್ವಾಗತಿಸಿವೆ. |