ಪಾಕಿಸ್ತಾನದ ಬಹುತೇಕ ಮಾಧ್ಯಮಗಳು ಹದ್ದು ಮೀರಿ ವರ್ತಿಸುವ ಮೂಲಕ ಅಭಿವೃದ್ದಿ ಕಾರ್ಯಗಳಿಗೆ ತೊಡಕಾಗುತ್ತಿರುವುದಾಗಿ ದೂರಿರುವ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ, ಪತ್ರಕರ್ತರೇ ದೊಡ್ಡ ಭಯೋತ್ಪಾದಕರು ಎಂದು ಕಿಡಿ ಕಾರಿರುವುದಾಗಿ ದಿ ನ್ಯೂಸ್ ಡೈಲಿ ವರದಿ ತಿಳಿಸಿದೆ.
ಎನ್‌ಡಬ್ಲ್ಯುಎಫ್‌ಪಿ ಹಾಗೂ ಫಾಟಾ ಪ್ರದೇಶದಲ್ಲಿನ ಭಯೋತ್ಪಾದನೆ ಕುರಿತು ಉದ್ಯಮಪತಿಗಳೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಾಧ್ಯಮದವರ ಮೇಲೆ ಹರಿಹಾಯ್ದ ಅವರು, ಪತ್ರಕರ್ತರು ದೊಡ್ಡ ಭಯೋತ್ಪಾದಕರಾಗಿದ್ದಾರೆ. ನಿಜವಾದ ಅರ್ಥದಲ್ಲಿ ಉಗ್ರರಿಗಿಂತ ಪತ್ರಕರ್ತರೇ ದೊಡ್ಡ ಭಯೋತ್ಪಾದಕರಾಗಿರುವುದಾಗಿ ಜರ್ದಾರಿ ಜರೆದಿದ್ದಾರೆ.
ಸಾರಹದ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ(ಎಸ್‌ಸಿಸಿಐ)ಯ ನಿಯೋಗವೊಂದು ಜನವರಿ 15ರಂದು ಜರ್ದಾರಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ, ದೇಶದ ಪತ್ರಕರ್ತರು ದೇಶದಲ್ಲಿನ ಪರಿಸ್ಥಿತಿಯ ಬಗ್ಗೆ ದಿಕ್ಕು ತಪ್ಪಿಸುವ ಮಾಹಿತಿ ನೀಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಮಾಧ್ಯಮಗಳು ಇಂತಹ ಸೂಕ್ಷ್ಮ ವಿಷಯಗಳನ್ನು ತುಂಬಾ ಎಚ್ಚರಿಕೆಯಿಂದ ನಿಭಾಯಿಸಬೇಕಾಗಿದೆ ಎಂದು ಹೇಳಿರುವುದಾಗಿ ವರದಿ ವಿವರಿಸಿದೆ.
ಆದರೆ ಅಧ್ಯಕ್ಷ ಜರ್ದಾರಿ ಅವರು ಮಾತುಕತೆ ವೇಳೆ ಪತ್ರಕರ್ತರು ಭಯೋತ್ಪಾದಕರು ಎಂಬುದಾಗಿ ಹೇಳಿರುವ ಹೇಳಿಕೆಯನ್ನು ಪಿಪಿಪಿ ಮುಖಂಡರು ತಳ್ಳಿಹಾಕಿದ್ದಾರೆ. ನಿಜಕ್ಕೂ ಅವರು ಪತ್ರಕರ್ತರು ಭಯೋತ್ಪಾದಕರು ಎಂದು ಘೋಷಿಸಿಲ್ಲ. ಜರ್ದಾರಿ ಅವರು ಮಾಧ್ಯಮದವರನ್ನು ತುಂಬಾ ಗೌರವಿಸುತ್ತಾರೆ. ಅವರಿಗೂ ಸಾಕಷ್ಟೂ ಪತ್ರಕರ್ತ ಮಿತ್ರರಿದ್ದಾರೆ. ಈಗಲೂ ಅವರು ಮಾಧ್ಯಮದವರೊಂದಿಗೆ ಸೌಹಾರ್ದ ಸಂಬಂಧ ಹೊಂದಿರುವುದಾಗಿ ಪಿಪಿಪಿ ಮೂಲಗಳು ಹೇಳಿದೆ. |