ಪ್ರಪ್ರಥಮ ಕಪ್ಪು ವರ್ಣಿಯ ಬರಾಕ್ ಹುಸೇನ್ ಒಬಾಮ ಅವರು ಅಮೆರಿಕದ 44ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು, ಕ್ಷಣಗಣನೆ ಆರಂಭವಾಗಿದೆ.ಹಿಂದಿನ ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದ ಬೈಬಲ್ ಮೇಲೆಯೇ ಪ್ರಮಾಣ ವಚನ ಸ್ವೀಕರಿಸುವುದಾಗಿ ಘೋಷಿಸಿರುವ ಬರಾಕ್ ಒಬಾಮ, ಲಿಂಕನ್ ಅವರೇ ತನಗೆ ಆದರ್ಶ, ಅವರ ಆಡಳಿತ, ಆದರ್ಶದಿಂದ ತಾನು ಪ್ರಭಾವಿತನಾಗಿರುವುದಾಗಿ ಹೇಳಿದ್ದಾರೆ. ಅಲ್ಲದೇ ನಾಗರಿಕ ಸಮಾನತೆ ಹಕ್ಕು, ವರ್ಣಭೇದ ನೀತಿಯ ವಿರುದ್ಧ ಹೋರಾಡಿ ಬಲಿಯಾದ ರೆವರೆಂಡ್ ಮಾರ್ಟಿನ್ ಲೂಥರ್ ಕಿಂಗ್ ಅವರ ಹೋರಾಟದ ಕುರಿತು ಮೆಲುಕು ಹಾಕಿದ ಅವರು, ಅವರು ಕೂಡ ತಾನು ಗೌರವಿಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.1776 ರಲ್ಲಿ ಸ್ವಾತಂತ್ರ್ಯಕ್ಕಾಗಿ ಅಮೆರಿಕನ್ನರ ಹೋರಾಟ ಆರಂಭವಾದ ಫಿಲಡೆಲ್ಫಿಯಾದಿಂದ , ರಾಷ್ಟ್ರದ ರಾಜಧಾನಿಯತ್ತ ರೈಲಿನಲ್ಲಿ ಹೊರಟಿದ್ದ ಒಬಾಮ ಸಾಹಸ ಯಾತ್ರೆಗೆ ಶನಿವಾರ ಚಾಲನೆ ದೊರಕಿತ್ತು.ಮಾರ್ಗದುದ್ದಕ್ಕೂ ಅಲ್ಲಲ್ಲಿ ಸ್ಪೂರ್ತಿದಾಯಕ ಭಾಷಣ ಮಾಡಿ, ಸ್ವಾತಂತ್ರ್ಯದ ಹೊಸ ಘೋಷಣೆಯ ಅಗತ್ಯವನ್ನು ಪ್ರತಿಪಾದಿಸುತ್ತಾ ಸಾಗಿರುವ ಬರಾಕ್ ಮಂಗಳವಾರ ರಾತ್ರಿ ಭಾರತೀಯ ಕಾಲ 10.30ಕ್ಕೆ ಅಧಿಕಾರದ ಗದ್ದುಗೆ ಏರಲಿದ್ದಾರೆ.ತಮ್ಮ ಭಾಷಣದುದ್ದಕ್ಕೂ ಬರಾಕ್ ಅವರು, ಯುದ್ಧ, ಆರ್ಥಿಕ ತುಮುಲದ ಬೇಗುದಿಯಲ್ಲಿರುವ ಅಮೆರಿಕನ್ನರಿಗೆ ಸಿದ್ದಾಂತ, ಸಣ್ಣತನ, ಪೂರ್ವಾಗ್ರಹ, ಧರ್ಮಾಂಧತೆಯಿದ ಹೊರಬರುವಂತೆ ಕರೆ ನೀಡಿದ್ದರು. |