ಜನಾಂಗೀಯ ದ್ವೇಷದಿಂದ ನಲುಗಿ ಹೋಗಿರುವ ಅಮೆರಿಕಾಕ್ಕೆ ಒಬಾಮ ರೂಪದಲ್ಲಿ ದೇವರು ಬಹುದೊಡ್ಡ ಬದಲಾವಣೆ ತಂದಿರುವುದು ತುಂಬಾ ಖುಷಿ ನೀಡುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಪಟ್ಟ ಏರಲಿರುವ ಬರಾಕ್ ಕುರಿತು ಭಾರತ ಮೂಲದ ಖ್ಯಾತ ಕ್ಯಾನ್ಸರ್ ವೈದ್ಯ ರಾಜೇಂದ್ರ ದೇಸಾಯಿ ಅವರ ನುಡಿಗಳಿವು.
ಅಮೆರಿಕದಲ್ಲಿ ಇದು ದೇವರು ಮಾಡಿದ ಮಹತ್ವದ ಬದಲಾವಣೆಯಾಗಿದೆ ಎಂದಿರುವ ಅವರು, ತಾವು ಸುಮಾರು 55 ವರ್ಷಗಳ ಹಿಂದೆ ಅಮೆರಿಕದಲ್ಲಿ ವರ್ಣಭೇದದ ಕಹಿಯನ್ನು ಉಂಡಿದ್ದೇನೆ.
1950ರ ದಶಕದಲ್ಲಿ ನನ್ನನ್ನೂ ಕೂಡ ಒಬ್ಬ ಕಪ್ಪು ವರ್ಣೀಯ ಎಂದೇ ದೂಷಿಸಿದ್ದರು. ಬಸ್ಸಿನಲ್ಲಿ ನನ್ನನ್ನು ಬಲವಂತದಿಂದ ಹಿಂಬದಿಯ ಸೀಟಿನಲ್ಲಿ ಕೂರಿಸಲಾಗಿತ್ತು. ಹೋಟೆಲ್‌ನಲ್ಲಿ ಕಪ್ಪು ವರ್ಣೀಯರ ಜತೆಗಷ್ಟೇ ಆಹಾರ ಸ್ವೀಕರಿಸಬೇಕಿತ್ತು ಎಂದು ಅವರು ಕ್ಯಾಲಿಫೋರ್ನಿಯಾದಿಂದ ದೂರವಾಣಿ ಮೂಲಕ ವಾರ್ತಾ ಸಂಸ್ಥೆಯೊಂದಕ್ಕೆ ತಮ್ಮ ಗತ ಜೀವನದ ನೋವನ್ನು ಹಂಚಿಕೊಂಡಿದ್ದಾರೆ.
ನಾನು ಮಹಾತ್ಮಗಾಂಧಿ ಅವರ ಅನುಯಾಯಿ, ಯಾವುದೇ ಅಪಮಾನವನ್ನೂ ಸಹಿಸುವ ಮನೋಭಾವ ಬೆಳೆಸಿಕೊಂಡಿದ್ದೆ. ನಾನು ಅಲ್ಲಿ ಅದರ ಹೊರತು ಬೇರೆ ಏನೂ ಮಾಡುವಂತಿರಲಿಲ್ಲ. ನನ್ನ ಕೆಲಸ ಏನಿದ್ದರೂ ಪರಮಾಣು ವೈದ್ಯಕೀಯದ ಬಗ್ಗೆ ಅಧ್ಯಯನ ನಡೆಸುವುದು ಮಾತ್ರವಾಗಿತ್ತು. ಹಾಗಾಗಿ ನಾನು ಅಲ್ಲಿ ಬಾಯಿ ಮುಚ್ಚಿಕೊಂಡು ಕುಳಿತಿದ್ದೆ ಎಂದು ನೆನಪನ್ನು ಮೆಲುಕು ಹಾಕಿದ್ದಾರೆ.
ಇದೀಗ ಒಬಾಮ ಅವರ ಆಯ್ಕೆ ನನ್ನಂತಹ ಲಕ್ಷಾಂತರ ಮಂದಿಗೆ ಆಶಾಕಿರಣವಾಗಿ ಮೂಡಿ ಬಂದಿದ್ದಾರೆ. ಇಲ್ಲಿನ ಚಲನಶೀಲ ಸಮಾಜ ತನ್ನ ಹಳೆಯ ತಪ್ಪನ್ನು ಬೇಗನೆ ಅರ್ಥ ಮಾಡಿಕೊಂಡು ಅತ್ಯುತ್ತಮ ವ್ಯಕ್ತಿಯನ್ನೇ ಅಧ್ಯಕ್ಷ ಪಟ್ಟಕ್ಕೆ ಏರಿಸಿರುವುದಾಗಿ ಸಂತಸ ವ್ಯಕ್ತಪಡಿಸಿದ್ದಾರೆ. |