ಮುಸುಕುಧಾರಿ ವ್ಯಕ್ತಿಯೊಬ್ಬ ಮಾನವ ಹಕ್ಕು ಸಂಘಟನೆಯ ವಕೀಲರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ನಗರದಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೆಂಟ್ರಲ್ ಮಾಸ್ಕೊದ ಜನನಿಬಿಡ ಪ್ರದೇಶದಲ್ಲಿ ವಕೀಲ ಸ್ಟಾನಿಸ್ಲಾವ್ ಮಾರ್ಕೆಲೊವ್ ಅವರನ್ನು ಗುಂಡಿಕ್ಕಿ ಕೊಂದಿರುವುದನ್ನು ಕಾನೂನು ಸಚಿವಾಲಯ ಖಚಿತಪಡಿಸಿದೆ.
ಅಲ್ಲದೇ ಈ ಸಂದರ್ಭದಲ್ಲಿ ನೊವಾಯ್ ಗಜೆಟಾದ ಪತ್ರಕರ್ತೆ ಅನಾಸ್ತಿಯಾ ಬಾಬ್ರೋವ್ ಎಂಬಾಕೆ ತಲೆಗೆ ಗುಂಡು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿರುವುದಾಗಿ ವೆಬ್‌ಸೈಟ್‌ವೊಂದರ ವರದಿ ಹೇಳಿದೆ.
ಈ ಹತ್ಯೆ ಪ್ರಕರಣ ಆಘಾತಕ್ಕೆ ಎಡೆಮಾಡಿಕೊಟ್ಟಿದೆ, ಆ ನಿಟ್ಟಿನಲ್ಲಿ ಕೂಡಲೇ ನಿಷ್ಪಕ್ಷಪಾತ ತನಿಖೆ ಕೈಗೊಳ್ಳಬೇಕು ಎಂದು ಮೆಮೋರಿಯಲ್ ರೈಟ್ಸ್ ಗ್ರೂಪ್ ಪ್ರಕಟಣೆಯಲ್ಲಿ ತಿಳಿಸಿದೆ.
ವಕೀಲರನ್ನು ಕೊಂದ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಅಂತಾರಾಷ್ಟ್ರೀಯ ಸಮುದಾಯ ಮಾಸ್ಕೋದ ಮೇಲೆ ಒತ್ತಡ ಹೇರಿ ನ್ಯಾಯ ಒದಗಿಸಬೇಕೆಂದು ಅಮೆರಿಕ ಮೂಲದ ಮಾನವ ಹಕ್ಕು ಕಣ್ಗಾವಲು ಸಮಿತಿ(ಎಚ್‌ಆರ್‌ಡಬ್ಲ್ಯು) ಈ ಸಂದರ್ಭದಲ್ಲಿ ಆಗ್ರಹಿಸಿದೆ. |