ಅಮೆರಿಕದ ಮೊದಲ ಕರಿಯ ಅಧ್ಯಕ್ಷನಾಗಿ ನಿಯುಕ್ತರಾಗಿರುವ ಬರಾಕ್ ಒಬಾಮ ಅವರು ಅಮೆರಿಕ ಇತಿಹಾಸದಲ್ಲೇ ಹಂತಕರ ಪಟ್ಟಿಯಲ್ಲಿರುವ ಅತ್ಯಂತ ದೊಡ್ಡ ವ್ಯಕ್ತಿ. ಜಾಗತಿಕ ಆರ್ಥಿಕ ಕುಸಿತವನ್ನು ತಡೆಗಟ್ಟುವ ಅತಿದೊಡ್ಡ ಮತ್ತು ಅಷ್ಟೇ ಅಪಾಯಕಾರಿಯಾದ ಹೊಣೆ 47ರ ಹರೆಯದ ಒಬಾಮ ಅವರ ಮೇಲಿದೆ ಮತ್ತು ತನ್ನನ್ನು ಮುಗಿಸಲು ಉಗ್ರವಾದಿಗಳು ಕಾಯುತ್ತಿದ್ದಾರೆ ಎಂಬುದೂ ಅವರಿಗೆ ಗೊತ್ತಿದೆ ಎಂಬುದಾಗಿ ಲಂಡನ್‌ನ 'ಡೈಲಿ ನ್ಯೂಸ್' ವರದಿ ಮಾಡಿದೆ.
ಕಟುವಾದಿ ಶ್ವೇತವರ್ಣೀಯರು ಅವರನ್ನು ಮುಗಿಸಲು ಪಣ ತೊಟ್ಟಿದ್ದಾರೆ. ಈ ಕಾರಣಕ್ಕೆ ಒಬಾಮ ಪದಗ್ರಹಣ ಸಮಾರಂಭಕ್ಕೆ ಸಿಐಎ ಉನ್ನತಾಧಿಕಾರಿಗಳು ಭದ್ರಕೋಟೆಯನ್ನೇ ನಿರ್ಮಿಸಿದ್ದಾರೆ. ವಾಷಿಂಗ್ಟನ್ ಡಿಸಿ ಈಗ ಅಕ್ಷರಶಃ ಅಭೇದ್ಯ ಕೋಟೆಯಾಗಿ ಪರಿವರ್ತಿತವಾಗಿದ್ದು, ಅಮೆರಿಕದ ರಾಜಧಾನಿಯಲ್ಲಿ ಸುಮಾರು 45 ಸಾವಿರ ಸೈನಿಕರು, ಪೊಲೀಸರು, ಗುಪ್ತ ದಳ ಏಜೆಂಟರು ಮತ್ತು ರಾಷ್ಟ್ರೀಯ ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿವೆ. 1960ರಲ್ಲಿ ಅಂದಿನ ಅಧ್ಯಕ್ಷ ಜಾನ್ ಎಫ್ ಕೆನಡಿಗಾದ ಸ್ಥಿತಿ ಒಬಾಮರಿಗೂ ಬರಬಾರದು ಎಂಬ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಮಾರಂಭಕ್ಕಾಗಿ ಜೆಟ್ ಫೈಟರ್ ವಿಮಾನಗಳೂ ಸಜ್ಜುಗೊಂಡಿವೆ. ಕು ಕ್ಲಕ್ಸ್ ಕ್ಲಾನ್, ನಿಯೋ-ನಾಜಿಗಳು ಮತ್ತು ಅಲ್ ಖೈದಾಗಳು ಒಬಾಮರ ರಕ್ತ ಹೀರಲು ಈಗಾಗಲೇ ಇಂಗಿತ ವ್ಯಕ್ತಪಡಿಸಿಕುವುದರಿಂದ ಅವರನ್ನು ಬುಲೆಟ್‌ಪ್ರೂಫ್ ಗ್ಲಾಸ್ ಮೂಲಕ ರಕ್ಷಿಸಲಾಗುತ್ತದೆ. ಅವರು ಬಾಂಬ್-ಪ್ರೂಫ್ ಲಿಮೋ ಕಾರಿನಲ್ಲಿ ತೆರಳಲಿದ್ದಾರೆ. ಸಣ್ಣ ಚಾಕುವಿನಿಂದ ಹಿಡಿದು ರಾಸಾಯನಿಕ ಅಸ್ತ್ರಗಳವರೆಗೂ, ಯಾವುದೇ ಸಂಭಾವ್ಯ ಅಪಾಯದ ಬಾರದಂತೆ ಅಮೆರಿಕದ ಸೇನೆಯು ಕಟ್ಟೆಚ್ಚರದಿಂದ ಕಾವಲು ಕಾಯುತ್ತಿದೆ.
ಗುಪ್ತದಳಗಳು ಈ ಉದ್ಘಾಟನಾ ಸಮಾರಂಭದ ಸಂದರ್ಭ ಬೆದರಿಕೆ ಪ್ರಮಾಣ ಹೆಚ್ಚಾಗಿದೆ ಎಂದು ಈಗಾಗಲೇ ಎಚ್ಚರಿಸಿವೆ. ಅಮೆರಿಕ ಅಧ್ಯಕ್ಷರಾಗಿ ಒಬಾಮ ತಮ್ಮ ಮೊದಲ ಭಾಷಣ ನೀಡುತ್ತಿರುವ ಕ್ಯಾಪಿಟಾಲ್ ಹಿಲ್ ಮತ್ತು ಲಿಂಕನ್ ಸ್ಮಾರಕದ ಸುತ್ತಮುತ್ತ ಮರೆಯಲ್ಲಿ ನಿಂತು ಗುಂಡು ಹಾರಿಸಬಲ್ಲ ಚಾಣಾಕ್ಷರನ್ನು ಸೇನೆಯು ಈಗಾಗಲೇ ನಿಯೋಜಿಸಿದೆ. |