ಅಮೆರಿಕದ 44ನೇ ಅಧ್ಯಕ್ಷರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ ಬರಾಕ್ ಒಬಾಮ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತ, ದೇಶ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವುದು ನಿಜ, ಹಾಗಂತ ಅದಕ್ಕೆ ಅಧೈರ್ಯಪಡಬೇಕಾದ ಅಗತ್ಯವಿಲ್ಲ ಅವೆಲ್ಲವನ್ನೂ ಸರಿದೂಗಿಸಲಾಗುವುದು ಎಂಬ ಅಭಯವನ್ನು ನೀಡಿದ್ದಾರೆ.ಮುಸ್ಲಿಂ ದೇಶಗಳು ಸೇರಿದಂತೆ ಜಗತ್ತಿನ ಎಲ್ಲ ದೇಶಗಳನ್ನೂ, ಎಲ್ಲ ಧರ್ಮದವರನ್ನೂ ಅಮೆರಿಕ ಪ್ರೀತಿಸುತ್ತದೆ. ಮುಂಬರುವ ವರ್ಷಗಳಲ್ಲಿ ಮಾನವೀಯತೆಯೊಂದೇ ವಿಶ್ವದ ಧರ್ಮವಾಗಲಿದೆ. ವಿಶ್ವಶಾಂತಿಗೆ ಅಮೆರಿಕ ಹೊಸ ಮುನ್ನುಡಿ ಬರೆಯಲಿದೆ ಎಂದು ನುಡಿದರು.ಕೆಲವೇ ಜನರ ಅತ್ಯಾಸೆ ಹಾಗೂ ಬೇಜವಾಬ್ದಾರಿತನದಿಂದಾಗಿ ನಮ್ಮ ಆರ್ಥಿಕ ವ್ಯವಸ್ಥೆಗೆ ಬಲವಾದ ಹೊಡೆತ ಬಿದ್ದಿದೆ, ಜನ ಮನೆ ಮಠ ಕಳೆದುಕೊಂಡಿದ್ದಾರೆ. ಉದ್ಯೋಗ ಹೋಗಿದೆ. ಉದ್ದಿಮೆಗಳು ಬಾಗಿಲು ಮುಚ್ಚಿವೆ. ಇವೆಲ್ಲ ನೈಜ ಸವಾಲುಗಳು, ಅಲ್ಪ ಕಾಲದಲ್ಲೇ ಈ ಸವಾಲುಗಳನ್ನು ಎದುರಿಸಲಾಗದು ಸತ್ಯ. ಆದರೆ ಅಮೆರಿಕ ಅವುಗಳನ್ನೆಲ್ಲಾ ಸಮರ್ಥವಾಗಿ ಎದುರಿಸಲಿದೆ ಎಂಬ ಭರವಸೆ ನೀಡಿದರು.ಎಲ್ಲರೂ ಸಮಾನರು, ಮುಕ್ತರು,ತನ್ಮ ಮನದಾಳದ ಬಯಕೆ ಈಡೇರಿಸಿಕೊಳ್ಳುವ ಹಕ್ಕು ಎಲ್ಲರಿಗೂ ಇದೆ ಎಂಬ ದೇವರ ವಚನವನ್ನು ನಾವೀಗ ಮತ್ತೊಮ್ಮೆ ಮೆಲುಕು ಹಾಕಬೇಕಾಗಿದೆ. ಅಮೆರಿಕದ ಸಂಸ್ಥಾಪಕರ ಹೋರಾಟ ಹಾಗೂ ಆಶಯವನ್ನು ನೆನಪಿಸಿಕೊಂಡ ಒಬಾಮ, ಅಮೆರಿಕದ ಪುನರ್ ನಿರ್ಮಾಣಕ್ಕೆ ಧೂಳು ಕೊಡವಿಕೊಂಡು ಮೇಲೇಳುವಂತೆ ದೇಶದ ಜನರಿಗೆ ಕರೆ ನೀಡಿದರು.ಭಯ ಹುಟ್ಟಿಸಿ, ಮುಗ್ದರನ್ನು ನಿರ್ದಯವಾಗಿ ಕೊಲ್ಲುವ ಭಯೋತ್ಪಾದನೆಗೆ ಎಂದಿಗೂ ತಲೆ ಬಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಬರಾಕ್, ನಮ್ಮ ಚೈತನ್ಯ ಗಟ್ಟಿಯಾಗಿದೆ. ಅನದನ್ನು ನೀವು ದುರ್ಬಲಗೊಳಿಸಲಾಗದು. ನಮ್ಮ ಮೇಲೆ ಸವಾರಿ ಮಾಡಲಾಗದು ಎಂದ ಅವರು, ನಾವು ನಿಮ್ಮನ್ನು ಸೋಲಿಸುತ್ತೇವೆ ಎಂಬ ಸ್ಪಷ್ಟ ಸಂದೇಶವನ್ನು ಈ ಸಂದರ್ಭದಲ್ಲಿ ರವಾಸಿದರು. |