ದೇಶದಲ್ಲಿನ ಆರ್ಥಿಕ ಹೊಡೆತಕ್ಕೆ ಕಂಗೆಡಬೇಡಿ, ಕೆಲವೇ ವ್ಯಕ್ತಿಗಳ ದುರಾಸೆಯಿಂದಾಗಿ ಅಂತಹ ಸ್ಥಿತಿ ನಿರ್ಮಾಣವಾಗಿದೆ. ಮತ್ತೆ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದಾಗಿ 44ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಬರಾಕ್ ಒಮಾಮ, ಭಯೋತ್ಪಾದನೆಯನ್ನು ಬಗ್ಗು ಬಡಿಯುವುದಾಗಿ ಘೋಷಿಸಿದ್ದಾರೆ.
ಅಮಾಯಕರ, ಮುಗ್ದರ ಮೇಲೆ ಮತಾಂಧತೆಯ ಮೂಲಕ ಹತೈಗೈಯುವುದನ್ನು ಸಹಿಸಲು ಸಾಧ್ಯವಿಲ್ಲ ಎಂದ ಅವರು, ಅಂತಾರಾಷ್ಟ್ರೀಯ ಸಂಬಂಧಕ್ಕೆ ಹೊಸ ಆಯಾಮ ನೀಡುವುದಾಗಿಯೂ ಭರವಸೆ ನೀಡಿದರು.
ಅಲ್ಲದೇ ಗ್ಯಾಂಟನಾಮೋ ಕೈದಿಗಳ ವಿಚಾರಣೆಗೆ ತಡೆ, ಭಯೋತ್ಪಾದನೆ, ಆರ್ಥಿಕ ಬಿಕ್ಕಟ್ಟು ಸೇರಿದಂತೆ ಹಲವಾರು ಗಂಭೀರ ಸಮಸ್ಯೆಗಳನ್ನು ಶೀಘ್ರವಾಗಿ ಅಲ್ಲದಿದ್ದರೂ ಅದಕ್ಕೊಂದು ಪರಿಹಾರ ಕಂಡುಹಿಡಿಯುವುದಾಗಿಯೂ ಹೇಳಿದರು.
ಹೌದು, ಇದು ಅಲ್ಪ ಅವಧಿಯಲ್ಲಿಯೇ ಬಗೆಹರಿಸಲಾರದ ಸಮಸ್ಯೆ, ಇದೊಂದು ಪ್ರಯಾಸದ ನಡಿಗೆ ಎಂಬುದನ್ನು ನಾನು ಅರಿತಿದ್ದೇನೆ. ಆದರೆ ಅಮೆರಿಕದಲ್ಲಿ ಎಲ್ಲವೂ ಸಾಧ್ಯ. ಅದಕ್ಕೆ ನಿಮ್ಮೆಲ್ಲರ ಬೆಂಬಲ ಅತ್ಯಗತ್ಯ ಎಂದು ಅಮೆರಿಕದ ಜನರಿಗೆ ಕರೆ ನೀಡಿದರು.
ನಮ್ಮ ಮುಂದೆ ಅಬ್ರಹಾಂ ಲಿಂಕನ್, ಮಾರ್ಟಿನ್ ಲೂಥರ್ ಅವರ ಆದರ್ಶದ ಹಾದಿಗಳಿವೆ. ಆ ಮೂಲಕವೇ ಅಮೆರಿಕವನ್ನು ಮತ್ತೆ ಸಶಕ್ತವಾಗಿ ಕಟ್ಟುವ ಮೂಲಕ ವಿಶ್ವಶಾಂತಿಯನ್ನು ಸಾರುವುದಾಗಿಯೂ ಘೋಷಿಸಿದರು. ಆರ್ಥಿಕ ವ್ಯವಸ್ಥೆ ಬಲಪಡಿಕೆಗೆ ಭದ್ರ ಬುನಾದಿ ಹಾಕಲಾಗುವುದು ಎಂದಿದ್ದಾರೆ.
ಜನರು ಕೂಡ ಐಶಾರಾಮಿ ಜೀವನಕ್ಕೆ ಕಡಿವಾಣ ಹಾಕಿ, ಸಾಮಾನ್ಯರಂತೆ ಬದುಕುವುದನ್ನು ರೂಢಿಸಿಕೊಳ್ಳಿ ಎಂಬುದಾಗಿಯೂ ಕೆನೆಪದರ ಜನರಿಗೆ ಕಿವಿಮಾತು ಹೇಳಿದರು. ಪರ್ಯಾಯ ಇಂಧನ ವ್ಯವಸ್ಥೆಗೂ ಹೊಸ ಮಾರ್ಗ ಕಂಡುಹಿಡಿಯಬೇಕಾದ ಅಗತ್ಯ ಇದೆ ಎಂದರು. |