ಇರಾಕ್‌ನಲ್ಲಿನ ಸಮರವನ್ನು ನಿಲ್ಲಿಸುವುದಾಗಿ ಭರವಸೆ ನೀಡಿರುವ ಅಧ್ಯಕ್ಷ ಬರಾಕ್ ಒಬಾಮ ಆ ನಿಟ್ಟಿನಲ್ಲಿ, ಮೊದಲ ಅಜೆಂಡಾ ಎನ್ನುವಂತೆ ಬುಧವಾರ ನೂತನ ಕಮಾಂಡರ್ ಇನ್ ಚೀಫ್ ಹಾಗೂ ರಾಷ್ಟ್ರೀಯ ಭದ್ರತಾ ಸಹಾಯಕರು, ಹಿರಿಯ ಕಮಾಂಡರ್‌ಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.
ಇರಾಕ್, ಅಫ್ಘಾನಿಸ್ತಾನದಲ್ಲಿನ ಯುದ್ದ ಸ್ಥಿತಿ ಕುರಿತು ಚರ್ಚೆ ನಡೆಸುವ ಅಂಗವಾಗಿ ರಕ್ಷಣಾ ಕಾರ್ಯದರ್ಶಿ ರೋಬರ್ಟ್ ಗೇಟ್ಸ್, ವಾಯುಪಡೆಯ ಮೈಕ್ ಮುಲ್ಲೆನ್ ಹಾಗೂ ರಾಷ್ಟ್ರೀಯ ರಕ್ಷಣಾ ಮಂಡಳಿಯ ಸದಸ್ಯರು, ಮಿಲಿಟರಿಯ ಹಿರಿಯ ಅಧಿಕಾರಿಗಳನ್ನು ಶ್ವೇತಭವನಕ್ಕೆ ಕರೆಯಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಅಫ್ಘಾನಿಸ್ತಾನದಲ್ಲಿರುವ ಮಿಲಿಟರಿ ಕಮಾಂಡರ್ ಡೇವಿಡ್ ಮಕೈಮನ್ ಹಾಗೂ ಇರಾಕ್‌ನ ಜನರಲ್ ರೇ ಒಡೈರ್ನೋ ಅವರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದಾರೆ ಎಂದು ಶ್ವೇತ ಭವನದ ಅಧಿಕಾರಿಗಳು ವಿವರಿಸಿದ್ದಾರೆ.
ಯುದ್ದ ನಿಲ್ಲಿಸುವ ಹಾಗೂ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಕುರಿತು ಮಾತುಕತೆ ನಡೆಸಲಾಗುವುದು ಎಂದಿದ್ದಾರೆ. ಆದರೆ ಸಭೆಯ ಕುರಿತು ಶ್ವೇತ ಭವನ ಸಾರ್ವಜನಿಕವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಅಫ್ಘಾನ್ ಆರ್ಥಿಕ ಸಬಲತೆ ಹಾಗೂ ಅಲ್ಲಿನ ಸಂಘರ್ಷದ ಕುರಿತಾಗಿಯೂ ಚರ್ಚೆ ನಡೆಯಲಿದ್ದು, ಜನರಲ್ ಡೇವಿಡ್ ಪೀಟರ್ಸ್ ಅವರೂ ಕೂಡ ಇಂದಿನ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. |