ಅಮೆರಿಕದ ನಿರ್ಗಮನ ಅಧ್ಯಕ್ಷ ಜಾರ್ಜ್ ಬುಷ್ ಅವರು ನೂತನ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಶುಭಾಶಯ ಪತ್ರ ಬರೆದಿಟ್ಟಿರುವುದಾಗಿ ಶ್ವೇತಭವನದ ಮೂಲಗಳು ತಿಳಿಸಿವೆ.ಸೋಮವಾರ ಈ ಪತ್ರ ಬರೆದ ಬುಷ್ ಓವಲ್ ಅಧ್ಯಕ್ಷ ಕಚೇರಿಯಲ್ಲಿರುವ ತಮ್ಮ ಕೊಠಡಿಯ ಮೇಲಿನ ಡ್ರಾಯರಲ್ಲಿ ಇಟ್ಟಿದ್ದಾರೆ ಎಂದು ಹೇಳಿದೆ. ಆದರೆ ಪತ್ರದಲ್ಲಿ ಏನು ಬರೆಯಲಾಗಿದೆ ಎಂಬುದು ಮಾತ್ರ ಚಿದಂಬರ ರಹಸ್ಯವಾಗಿದೆ. ದೇಶದಲ್ಲಿ ನೂತನ ಶಕೆ ಆರಂಭಿಸಲು ಹೊರಟಿರುವ ಒಬಾಮಗೆ ಶುಭ ಹಾರೈಸುವುದಷ್ಟೇ ಪತ್ರದ ಸಾರಾಂಶ ಎಂದು ತಿಳಿಸಿದೆ.ಉತ್ತರಾಧಿಕಾರಿಗೆ ಪತ್ರ ಬರೆದಿಡುವ ಸಂಪ್ರದಾಯಕ್ಕೆ ನಾಂದಿ ಹಾಡಿದ ಮಾಜಿ ಅಧ್ಯಕ್ಷ ರೊನಾಲ್ಡ್ ರೆಗಾನ್ ಅವರು ತಮ್ಮ ಓವಲ್ ಕಚೇರಿ ತೊರೆಯುವ ಮುನ್ನ ತಮ್ಮ ಉತ್ತರಾಧಿಕಾರಿ ಹಿರಿಯ ಬುಷ್‌ಗೆ ಸೋಲು ನಿಮ್ಮನ್ನು ಬೀಳಿಸಲು ಬಿಡಬೇಡಿ ಎಂದು ಬರೆದಿದ್ದರು.ಸೀನಿಯರ್ ಬುಷ್ ಅವರು ಬಿಲ್ ಕ್ಲಿಂಟನ್‌ಗೆ ಪತ್ರ ಬರೆದಿದ್ದರು. ಕ್ಲಿಂಟನ್ ನಿವೃತ್ತಿಯಾಗುವ ವೇಳೆ ಜಾರ್ಜ್ ಬುಷ್ ಅವರನ್ನು ಉದ್ದೇಶಿಸಿ ಪತ್ರ ಬರೆದಿದ್ದರು. ಅಷ್ಟೇ ಅಲ್ಲದೇ ಸೀನಿಯರ್ ಬುಷ್ ತಮಗೆ ಬರೆದಿಟ್ಟ ಪತ್ರವನ್ನೂ ಜತೆಗೆ ಇಟ್ಟಿದ್ದರು. ಈಗ ಬುಷ್ ಅವರು ಒಬಾಮಗೆ ಪತ್ರ ಬರೆಯುವ ಮೂಲಕ ಶ್ವೇತಭವನದ ನಿರ್ಗಮನ ಅಧ್ಯಕ್ಷರ 'ಸಂಪ್ರದಾಯವನ್ನು'ಮುಂದುವರಿಸಿದ್ದಾರೆ. |