ಬರಾಕ್ ಹುಸೇನ್ ಒಬಾಮ ಅವರು 44 ರಾಷ್ಟ್ರಪತಿಗಳ ಸಾಲಿನಲ್ಲಿ ಮಂಗಳವಾರ ಅಮೆರಿಕದ ಮೊದಲ ಆಫ್ರಿಕನ್-ಅಮೆರಿಕನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಳೆದ ಎರಡು ಶತಮಾನಗಳಲ್ಲಿ "ಅಧ್ಯಕ್ಷೀಯ ಉದ್ಘಾಟನಾ" (ರಾಷ್ಟ್ರಪತಿ ಪದಗ್ರಹಣ ಸಮಾರಂಭವನ್ನು ಹೀಗಂತ ಅಮೆರಿಕನ್ನರು ಹೇಳುತ್ತಾರೆ) ಕಾರ್ಯಕ್ರಮಗಳ ಕುರಿತು ಹಿನ್ನೋಟ ಹರಿಸಿದರೆ, ಅಪರೂಪದ ವಿಷಯಗಳು ತಿಳಿಯುತ್ತವೆ. ಅವುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:
* 44ನೇ ರಾಷ್ಟ್ರಪತಿ ಒಬಾಮ ಅವರ ಪದಸ್ವೀಕಾರ ಸಮಾರಂಭವು ಔಪಚಾರಿಕವಾಗಿ ನಡೆಯುತ್ತಿರುವ 56ನೇ ಸಮಾರಂಭ. 15 ರಾಷ್ಟ್ರಪತಿಗಳು ಇದುವರೆಗೆ ಎರಡನೇ ಅವಧಿಗೆ ಆಯ್ಕೆಯಾಗಿದ್ದರು ಮತ್ತು ರೂಸ್‌ವೆಲ್ಟ್ ಅವರಂತೂ ನಾಲ್ಕು ಬಾರಿ ಈ ಪದವಿಗೆ ನೇಮಕಗೊಂಡಿದ್ದರು.
* ಜಾರ್ಜ್ ವಾಷಿಂಗ್ಟನ್ ಅವರು ಅತ್ಯಂತ ಕಿರಿಯ ಪದಗ್ರಹಣ ಭಾಷಣ ಮಾಡಿದ್ದರು (1793ರಲ್ಲಿ ಕೇವಲ 135 ಶಬ್ದಗಳು).
* ವಿಲಿಯಂ ಹ್ಯಾರಿಸನ್ ಅವರು ಸುದೀರ್ಘವಾದ ಪದಗ್ರಹಣ ಭಾಷಣ ಮಾಡಿದ್ದರು (1841ರಲ್ಲಿ 8,445 ಶಬ್ದಗಳು).
* ಥೋಮಸ್ ಜೆಫರ್‌ಸನ್ ಅವರು ಪದಗ್ರಹಣ ಸಮಾರಂಭಕ್ಕೆ ನಡೆದೇ ಬಂದ ಮತ್ತು ಹೋದ ಏಕೈಕ ರಾಷ್ಟ್ರಪತಿ ಮತ್ತು ಕ್ಯಾಪಿಟಲ್‌ನಲ್ಲಿ (1801) ಪದ ಸ್ವೀಕರಿಸಿದ ಮೊದಲ ರಾಷ್ಟ್ರಪತಿಯೂ ಹೌದು.
* ಮೊದಲ ಬಾರಿಗೆ ಪದಗ್ರಹಣದ ಔತಣ ಕೂಟ ಏರ್ಪಡಿಸಲಾಗಿದ್ದು ಜೇಮ್ಸ್ ಮ್ಯಾಡಿಸನ್ ಅವರಿಗೆ (1809).
* ತಮ್ಮ ಪೆರೇಡ್‌ನಲ್ಲಿ ಮೊದಲ ಬಾರಿಗೆ ಆಫ್ರಿಕನ್-ಅಮೆರಿಕನ್ನರನ್ನು ಸೇರಿಸಿಕೊಂಡ ಮೊದಲ ರಾಷ್ಟ್ರಪತಿ ಅಬ್ರಹಾಂ ಲಿಂಕನ್ (1865).
* ವೂಡ್ರೋ ವಿಲ್ಸನ್‌ರ ಎರಡನೇ ಬಾರಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಪದಗ್ರಹಣ ಪೆರೇಡ್‌ನಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳಲಾಯಿತು (1917).
* ಪದಗ್ರಹಣ ಸಮಾರಂಭಕ್ಕೆ ತಮ್ಮ ಕಾರಿನಲ್ಲಿ ಆಗಮಿಸಿದ ಮೊದಲ ರಾಷ್ಟ್ರಪತಿ ವಾರೆನ್ ಹಾರ್ಡಿಂಗ್ (1921).
* ರೇಡಿಯೋದಲ್ಲಿ ಪ್ರಸಾರವಾದ ಮೊದಲ ಅಧ್ಯಕ್ಷೀಯ ಪದಗ್ರಹಣ ಕಾರ್ಯಕ್ರಮವೆಂದರೆ ಕೆಲ್ವಿನ್ ಕೂಲಿಡ್ಜ್ ಅವರದು (1925).
* ಎರಡನೇ ವಿಶ್ವಯುದ್ಧದ ಕಾರಣದಿಂದಾಗಿ ಅನಿಲ ಮತ್ತು ಮರಮಟ್ಟುಗಳ ಕೊರತೆಯಿಂದಾಗಿ ಫ್ರಾಂಕ್ಲಿನ್ ರೂಸ್‌ವೆಲ್ಟ್‌ರ ನಾಲ್ಕನೇ ಪದಗ್ರಹಣ ಸಮಾರಂಭದ ಪೆರೇಡ್ ಅನ್ನು ರದ್ದುಗೊಳಿಸಬೇಕಾಗಿ ಬಂದಿತ್ತು (1945).
* ದೂರದರ್ಶನದಲ್ಲಿ ಪದಗ್ರಹಣ ಸಮಾರಂಭದ ನೇರ ಪ್ರಸಾರ ಅವಕಾಶ ಪಡೆದ ಮೊದಲ ರಾಷ್ಟ್ರಪತಿ ಹ್ಯಾರಿ ಟ್ರೂಮನ್ (1945).
* ವರ್ಣಮಯ ದೂರದರ್ಶನದಲ್ಲಿ ಪದಗ್ರಹಣ ಸಮಾರಂಭದ ನೇರ ಪ್ರಸಾರ ಪಡೆದ ಮೊದಲ ಅಧ್ಯಕ್ಷ ಜಾನ್ ಕೆನಡಿ (1961).
* ಅಧಿಕೃತ ಪದಗ್ರಹಣ ಸಮಾರಂಭದಲ್ಲಿ ಕಾಣಿಸಿಕೊಂಡ ಮೊದಲ ಕವಿ ರಾಬರ್ಟ್ ಫ್ರಾಸ್ಟ್ (1961ರಲ್ಲಿ ಜಾನ್ ಕೆನಡಿ ಪದಗ್ರಹಣ).
* ಮಹಿಳೆಯೊಬ್ಬರಿಂದ ಅಧಿಕಾರದ ಪ್ರಮಾಣವಚನ ಸ್ವೀಕರಿಸಿದ ಏಕೈಕ ರಾಷ್ಟ್ರಪತಿ ಲಿಂಡನ್ ಜಾನ್ಸನ್ (1963ರಲ್ಲಿ ಅಮೆರಿಕ ಜಿಲ್ಲಾ ನ್ಯಾಯಾಧೀಶೆ ಸಾರಾ ಹ್ಯೂಗ್ಸ್ ಅವರಿಂದ).
* ಬಿಲ್ ಕ್ಲಿಂಟನ್ ಅವರ ಎರಡನೇ ಅಧಿಕಾರಗ್ರಹಣ ಕಾರ್ಯಕ್ರಮವು ಇಂಟರ್ನೆಟ್‌ನಲ್ಲಿಯೂ ಪ್ರಸಾರವಾದ ಮೊದಲ ಕಾರ್ಯಕ್ರಮ (1997).
* ತಮ್ಮ ಎರಡನೇ ಪದಗ್ರಹಣ ಸಮಾರಂಭದಲ್ಲಿ ಜಾರ್ಜ್ ಡಬ್ಲ್ಯು ಬುಷ್ ಅವರು 20ಕ್ಕೂ ಹೆಚ್ಚು ಬಾರಿ 'ಫ್ರೀಡಂ' (ಸ್ವಾತಂತ್ರ್ಯ) ಪದವನ್ನು ಉಚ್ಚರಿಸಿದ್ದರು (2005). |