ದೀರ್ಘಾವಧಿಯ ಸೆನೆಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಾಗೂ ವಿದೇಶಾಂಗ ನೀತಿಯ ಹಿರಿಯ ತಜ್ಞ ಜೋ ಬಿಡೆನ್ ಅವರು, ಭಾರತ ಆಪ್ತಮಿತ್ರ ದೇಶವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಅಮೆರಿಕದ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಿಡೆನ್, ವಿದೇಶಾಂಗ ವ್ಯವಹಾರ ನೀತಿಗಳ ಸಮಿತಿಯ ವರಿಷ್ಠರೂ ಆಗಿರುವ ಅವರು ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
65ರ ಹರೆಯದ ಬಿಡೆನ್ ಸೆನೆಟ್‌ನ ನ್ಯಾಯಾಂಗ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಅಪರಾಧ ತಡೆ ಹಾಗೂ ನಾಗರಿಕ ಹಕ್ಕುಗಳಂತಹ ಕ್ಲಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಅವರ ಪಾತ್ರ ಗಮನಾರ್ಹವಾದದ್ದು. ಅಲ್ಲದೇ ಈ ಸಂದರ್ಭದಲ್ಲಿ ಬಿಡೆನ್, ಬುಷ್ ಆಡಳಿತದಲ್ಲಿನ ವಿದೇಶಾಂಗ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ. ಇರಾಕ್ ದಾಳಿಯನ್ನು ಬೆಂಬಲಿಸಿದ್ದ ಅವರು, ಆ ಸಮರ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬಹುದಾಗಿತ್ತು ಎಂದು ಹೇಳಿದ್ದಾರೆ.
1972ರಲ್ಲಿ ಪ್ರಥಮ ಬಾರಿಗೆ ಸೆನೆಟರ್ ಆಗಿ ಆಯ್ಕೆ ಆದ ಬಿಡೆನ್, ನಂತರ ಅಮೆರಿಕದ ಇತಿಹಾಸದಲ್ಲಿಯೇ ಸತತವಾಗಿ 1978,1984,1990, 1996 ಹಾಗೂ 2002ರಲ್ಲಿ ಮರು ಆಯ್ಕೆಗೊಳ್ಳುವುದರೊಂದಿಗೆ ದಾಖಲೆ ಸೃಷ್ಟಿಸಿದ್ದರು.
ಪಾದರಸದಂತಹ ವ್ಯಕ್ತಿತ್ವ ಹೊಂದಿರುವ ಬಿಡೆನ್ ವೈಯಕ್ತಿಕ ಬದುಕು ದುರಂತಕ್ಕೆ ಸಿಲುಕಿದ್ದು, 1972ರಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಅವರ ಪತ್ನಿ ಮತ್ತು ಮಗಳು ಸಾವನ್ನಪ್ಪಿದ್ದು, ಇಬ್ಬರು ಪುತ್ರರು ಗಾಯಗೊಂಡಿದ್ದರು. ನಂತರ 1977ರಲ್ಲಿ ಮರು ಮದುವೆಯಾಗಿದ್ದರು. |