ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರ ಹಾಗೂ ಅಫ್ಘಾನ್ ಗಡಿಭಾಗದಲ್ಲಿ ಸುವ್ಯವಸ್ಥಿತವಾಗಿ ಭದ್ರತೆಯನ್ನು ನೀಡಿದಲ್ಲಿ ಮಿಲಿಟರಿಯೇತರ ಷರತ್ತಿನ ಆರ್ಥಿಕ ನೆರವು ನೀಡುವುದಾಗಿ ಬರಾಕ್ ಒಬಾಮ ಅವರ ನೂತನ ಆಡಳಿತ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಪಾಕಿಸ್ತಾನಕ್ಕೆ ಮಿಲಿಟರಿಯೇತರ ಆರ್ಥಿಕ ನೆರವನ್ನು ಹೆಚ್ಚಿಸಲು ಅಧ್ಯಕ್ಷ ಬರಾಕ್ ಒಬಾಮ ಹಾಗೂ ಉಪಾಧ್ಯಕ್ಷ ಜೋ ಬಿಡೆನ್ ಅವರು ನಿರ್ಧರಿಸಿದ್ದು, ಈ ಬಗ್ಗೆ ಶೀಘ್ರವೇ ವಿದೇಶಾಂಗ ನೀತಿ ಅಜೆಂಡಾದ ದಾಖಲೆಗಳನ್ನು ಬಿಡುಗಡೆಗೊಳಿಸುವಂತೆ ಒಬಾಮ ಅವರು ಓವಲ್ ಕಚೇರಿ ಪ್ರವೇಶಿಸಿದ ನಂತರ ತಿಳಿಸಿರುವುದಾಗಿ ಶ್ವೇತಭವನ ಹೇಳಿದೆ.
ಅಫ್ಘಾನ್ ಹಾಗೂ ಪಾಕಿಸ್ತಾನದ ಪರಿಸ್ಥಿತಿ ಬಗ್ಗೆ ಬಿಡೆನ್ ಆಳವಾಗಿ ತಿಳಿದಿದ್ದಾರೆ. ಅಲ್ಲದೇ ಅವರು ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಆ ನಿಟ್ಟಿನಲ್ಲಿ ಯುಎಸ್ ಸೆನೆಟ್‌ನಲ್ಲಿ ವಿವರಣೆ ನೀಡಲಿದ್ದಾರೆ ಎಂದು ತಿಳಿಸಿದೆ.
ಪಾಕಿಸ್ತಾನಕ್ಕೆ ಮುಂದಿನ ಐದು ವರ್ಷಗಳ ಕಾಲ ಮಿಲಿಟರಿಯೇತರ ಆರ್ಥಿಕ ನೆರವು ನೀಡುವ ಕುರಿತು ರಿಪಬ್ಲಿಕ್ ಸನೆಟರ್ ರಿಚರ್ಡ್ ಲೂಗಾರ್ ಪ್ರಸ್ತಾಪ ಮಂಡಿಸಲಿದ್ದಾರೆ.
ಮಿಲಿಟರಿ ಹೊರತುಪಡಿಸಿ, ಪಾಕಿಸ್ತಾನದನಲ್ಲಿ ಶಾಲೆ, ಔಷಧಾಲಯ, ಮೂಲಭೂತ ಸೌಲಭ್ಯಗಳ ಅಭಿವೃದ್ದಿ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳಲ್ಲಿ 7.5 ಶತಕೋಟಿ ಡಾಲರ್ ಆರ್ಥಿಕ ನೆರವು ನೀಡಲಿದೆ. ಅಲ್ಲದೇ ತಾಲಿಬಾನ್ ಮತ್ತು ಅಲ್ ಕೈದಾ ಭಯೋತ್ಪಾದನಾ ಚಟುವಟಿಕೆಗಳನ್ನು ಮಟ್ಟ ಹಾಕಬೇಕಾದ ಅಗತ್ಯ ಪಾಕಿಸ್ತಾನಕ್ಕೆ ಇದೆ ಎಂದಿದೆ. |