ಪಾಕಿಸ್ತಾನ ವಾಯುವ್ಯ ಭಾಗದ ಸ್ವಾಟ್ ಕಣಿವೆ ಪ್ರದೇಶದಲ್ಲಿ ಈ ಮೊದಲು ಹುಡುಗಿಯರು ಶಾಲೆಗೆ ಹೋಗುವಂತಿಲ್ಲ ಎಂದು ಫರ್ಮಾನು ಹೊರಡಿಸಿದ್ದ ತಾಲಿಬಾನಿಗಳು, ಇದೀಗ ಅಲ್ಲಿನ ಮುಸ್ಲಿಮರು ತಲೆ ಕಡ್ಡಾಯವಾಗಿ ಟೊಪ್ಪಿ ಹಾಕಬೇಕು ನಿರ್ದೇಶನ ನೀಡಿದ್ದಲ್ಲದೆ, ಗಡ್ಡ ಬೋಳಿಸಿಕೊಂಡರೆ ಹುಶಾರ್ ಎಂದು ಎಚ್ಚರಿಕೆ ನೀಡಿದೆ.
ಸ್ವಾಟ್ ಭಾಗದ ನಿವಾಸಿಗಳು ಟೊಪ್ಪಿ ಕಡ್ಡಾಯವಾಗಿ ಧರಿಸುವಂತೆ ಹೇಳಿ ಜನವರಿ 25ರವರೆಗೆ ಗಡುವು ವಿಧಿಸಿದ್ದು, ಗಡ್ಡವನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು ಎಂದು ಮಂಗಳವಾರ ತಾಲಿಬಾನ್ ಮತ್ತೊಂದು ಹುಕುಂ ಹೊರಡಿಸಿದೆ.
ಜನವರಿ 25ರ ಬಳಿಕ ಯಾರೇ ಒಬ್ಬ ಗಡ್ಡ ಬಿಡಲು ಸಮ್ಮತಿಸದಿದ್ದರೆ ಹಾಗೂ ಗಡ್ಡ ಒಪ್ಪ ಮಾಡಿಕೊಂಡರೆ ಎಚ್ಚರ ಎಂದಿರುವ ತಾಲಿಬಾನ್, ಇಡೀ ಸಮಾಜವನ್ನೇ ಇಸ್ಲಾಂ ಮಾಡುವತ್ತ ಪ್ರಯತ್ನಿಸಲಾಗುವುದು ಎಂದು ಧಮಕಿ ಹಾಕಿದೆ. ನಾವು ಜನರ ಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿರುವುದಾಗಿಯೂ ಈ ಸಂದರ್ಭದಲ್ಲಿ ತಿಳಿಸಿದೆ.
ಇಸ್ಲಾಮಾಬಾದ್‌ನಿಂದ 160 ಕಿ.ಮೀ.ದೂರದಲ್ಲಿರುವ ಸ್ವಾಟ್ ಕಣಿವೆ ಭಾಗದಲ್ಲಿನ ಜನರ ಮೇಲೆ ತನ್ನದೇ ಸ್ವಯಂ ಘೋಷಿತ ಕಾನೂನನ್ನು ಹೇರುವಲ್ಲಿ ಪ್ರಯತ್ನಿಸುತ್ತಿದೆ.
ಅಲ್ಲದೇ ಸ್ವಾಟ್ ಕಣಿವೆಯಲ್ಲಿರುವ ಕ್ಷೌರಿಕರು ಗಡ್ಡ ಶೇವಿಂಗ್ ಮಾಡುವುದಾಗಲಿ, ಒಪ್ಪ ಮಾಡುವುದಾಗಲಿ ಮಾಡಿದರೆ ಜಾಗ್ರತೆ ಎಂದು ಎಚ್ಚರಿಕೆ ನೀಡಿರುವ ತಾಲಿಬಾನ್, ಎಲ್ಲಾ ಕ್ಷೌರಿಕರು ತಮ್ಮ ಅಂಗಡಿಗಳ ಹೊರಭಾಗದಲ್ಲಿ 'ಶೇವಿಂಗ್ ಮಾಡುವುದಿಲ್ಲ' ಎಂಬ ಬೋರ್ಡ್ ಹಾಕುವಂತೆ ಸೂಚಿಸಿದೆ. |