ಅಮೆರಿಕದ ನೂತನ ಅಧ್ಯಕ್ಷ ಬರಾಕ್ ಒಮಾಮ ಅವರು ಪ್ರಥಮ ದಿನದಂದು ಪಾಕ್ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಕಿಡಿಕಾರಿರುವ ಪಾಕಿಸ್ತಾನ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದು, ಬರಾಕ್ ನೇತೃತ್ವದ ಆಡಳಿತ ಸಕರಾತ್ಮಕ ನಿಲುವನ್ನು ಹೊಂದಿಲ್ಲ, ಆ ನಿಟ್ಟಿನಲ್ಲಿ ಎಲ್ಲ ಪ್ರಸ್ತಾವನೆಗಳನ್ನು ಪುನರ್ ಪರಿಶೀಲಿಸಬೇಕು ಎಂದು ಹೇಳಿದೆ.
ಪ್ರಪ್ರಥಮ ಬಾರಿಗೆ ಬುಧವಾರ ಶ್ವೇತಭವನ ಪ್ರವೇಶಿಸಿದ ಬರಾಕ್, ಭಯೋತ್ಪಾದನೆಯನ್ನು ಮೊದಲು ಮಟ್ಟ ಹಾಕಿ, ಹಾಗೆಯೇ ಮಿಲಿಟರಿಯೇತರವಾಗಿ ಷರತ್ತು ಬದ್ದ ಆರ್ಥಿಕ ನೆರವು ನೀಡುವುದಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು.
ಅಲ್ಲದೇ ಅಫ್ಘಾನ್ ಮತ್ತು ಗಡಿಭಾಗದಲ್ಲಿರುವ ತಾಲಿಬಾನ್ ಮತ್ತು ಅಲ್ ಕೈದಾ ಉಗ್ರಗಾಮಿ ಸಂಘಟನೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವಂತೆ ಅಮೆರಿಕ ಕಟುವಾಗಿ ಹೇಳಿತ್ತು.
ಅಧ್ಯಕ್ಷ ಚುನಾವಣೆಯ ಪ್ರಚಾರ ಸಂದರ್ಭದಲ್ಲಿಯೇ ಬರಾಕ್ ಅವರು, ಪಾಕ್ ಹಾಗೂ ಗಡಿಭಾಗದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದನೆಯನ್ನು ಮಟ್ಟ ಹಾಕುವ ಬಗ್ಗೆ ಒತ್ತಿ ಹೇಳಿದ್ದರು. ಹಾಗೇ ಪಾಕ್ ಒಳಗಡೆಯೇ ಇದ್ದು ಕಾರ್ಯಾಚರಣೆ ನಡೆಸುತ್ತಿರುವ ಅಲ್ ಕೈದಾವನ್ನು ಇಸ್ಲಾಮಾಬಾದ್ ಮಟ್ಟ ಹಾಕುವ ಕೆಲಸ ಮಾಡದಿದ್ದರೆ ಅದನ್ನು ಅಮೆರಿಕವೇ ಮಾಡಬೇಕಾಗುತ್ತದೆ ಎಂದು ಹೇಳಿದ್ದರು. ಆ ನೆಲೆಯಲ್ಲಿ ಬರಾಕ್ ತಮ್ಮ ಅಜೆಂಡಾದ ಮುಂದುವರಿಕೆಯ ಭಾಗ ಎಂಬಂತೆ, ಪಾಕ್‌ಗೆ ಬುಧವಾರ ಎಚ್ಚರಿಕೆಯ ಸೂಚನೆ ನೀಡಿದ್ದರು.
ಒಬಾಮ ಹೇಳಿಕೆ ಕುರಿತು ಜಿಯೋ ಟಿವಿಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದಲ್ಲಿನ ಪಾಕ್ ರಾಯಭಾರಿ ಹುಸೈನ್ ಹಕ್ಕಾನಿ, ಪಾಕ್ ಬಗ್ಗೆ ಬರಾಕ್ ಶಾಂತಚಿತ್ತದಿಂದ ವರ್ತಿಸುತ್ತಾರೆಂಬ ಆಶಾಭಾವ ಹೊಂದಿರುವುದಾಗಿ ಹೇಳಿದ್ದಾರೆ. |