ಅಮೆರಿಕದ ತೀವ್ರ ವಿವಾದಿತವಾಗಿರುವ ಕೈದಿಗಳ ಪ್ರಮುಖ ವಿಚಾರಣಾ ಕೇಂದ್ರವಾಗಿರುವ 'ಗ್ವಾಂಟಾನಾಮೋ ಬೇ' ಅನ್ನು ವರ್ಷದೊಳಗೆ ಬಂದ್ ಮಾಡಲಾಗುವುದು ಎಂಬ ನೂತನ ಅಧ್ಯಕ್ಷ ಬರಾಕ್ ಹುಸೇನ್ ಒಬಾಮ ಅವರ ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ.ಕೈದಿಗಳ ಶಿಬಿರವಾಗಿರುವ ಗ್ವಾಂಟಾನಾಮೋ ಬೇ ಅನ್ನು ಬಂದ್ ಮಾಡುವುದಾಗಿ ಹೇಳುತ್ತಿರುವ ಬರಾಕ್ ಅವರ ನಿರ್ಧಾರವೇ ತುಂಬಾ 'ಅಪಾಯಕಾರಿ ಹಾಗೂ ಬೇಜವಾಬ್ದಾರಿತನದ್ದು' ಎಂದು ಮೂವ್ ಅಮೆರಿಕ ಫಾರ್ವರ್ಡ್ ಸಂಘಟನೆ ಕಟುವಾಗಿ ವಿರೋಧಿಸಿದೆ.ಗ್ವಾಂಟಾನಾಮೋ ಬೇ ಅನ್ನು ವರ್ಷದೊಳಗೆ ಬಂದ್ ಮಾಡಲಾಗುವುದು ಎಂಬ ನಿರ್ಣಯಕ್ಕೆ ಬರಾಕ್ ಸಹಿಯುಳ್ಳ ಪ್ರಸ್ತಾವನೆಯನ್ನು ಬುಧವಾರ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅದಕ್ಕೆ ವಿರೋಧ ವ್ಯಕ್ತವಾಗತೊಡಗಿದೆ.ಬರಾಕ್ ಅವರ ಈ ನಿರ್ಧಾರ ನಿಜಕ್ಕೂ ಆಘಾತ ತರುವಂತದ್ದಾಗಿದೆ, ಕೈದಿಗಳ ವಿಚಾರಣಾ ಶಿಬಿರವನ್ನು ಬಂದ್ ಮಾಡುವ ಮೂಲಕ ಭಯೋತ್ಪಾದಕರನ್ನು ಮತ್ತಷ್ಟು ಮುಕ್ತವಾಗಿಸಲು ಬಿಟ್ಟು, ಅಮೆರಿಕನ್ನರ ಶಾಂತಿಗೆ ಭಂಗ ತರಲು ಯತ್ನಿಸುತ್ತಿರುವುದಾಗಿ ಮೂವ್ ಅಮೆರಿಕ ಫಾರ್ವರ್ಡ್ ಸಂಘಟನೆ ಆರೋಪಿಸಿದೆ.ಗ್ವಾಂಟಾನಾಮೋ ಬೇ ಬಂದ್ ಮಾಡುವುದಾಗಿ ಹೇಳಿಕೆ ನೀಡುವ ಮೂಲಕ ಬರಾಕ್ ಅವರು ತಪ್ಪು ಸಂದೇಶವನ್ನು ರವಾನಿಸಿದಂತಾಗಿದೆ. ಆ ನಿಟ್ಟಿನಲ್ಲಿ ಅಮೆರಿಕ ದೃಢವಾದ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದೆ.ಏನಿದು ಗ್ವಾಂಟಾನಾಮೋ ಬೇ: ಕ್ಯೂಬಾದ ಆಗ್ನೇಯ ದ್ವೀಪ ಭಾಗದ ಬೃಹತ್ ಹಾರ್ಬರ್ ಪ್ರದೇಶದಲ್ಲಿರುವ ಪ್ರದೇಶವೇ ಗ್ವಾಂಟಾನಾಮೋ ಬೇಯ ಸುತ್ತಲೂ ಭದ್ರ ಕೋಟೆ ನಿರ್ಮಿಸಲಾಗಿದೆ. ಇಲ್ಲಿ ಆರ್ಮಿ, ನೇವಿ ತರಬೇತಿ ಕೇಂದ್ರ ಕೂಡ ಇದೆ. ಇಲ್ಲಿರುವ ಗ್ವಾಂಟಾನಾಮೋ ಬೇ ಶಂಕಿತ ಕೈದಿಗಳ ವಿಚಾರ ನೆಲೆ.ಈ ಮೊದಲು ಗ್ವಾಂಟಾನಾಮೋಗೆ ಕ್ಯೂಬಾ ಮತ್ತು ಹೈಟಿಯನ್ ನಿರಾಶ್ರಿತರನ್ನು ತಂದು ಕೂಡಿ ಹಾಕಲಾಗುತ್ತಿತ್ತು. ಅಲ್ಲಿ ಕೈದಿಗಳಿಗೆ ನೀಡುತ್ತಿರುವ ಚಿತ್ರಹಿಂಸೆ ಮಾನವಹಕ್ಕು ಆಯೋಗ ಸೇರಿದಂತೆ ಹಲವಾರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದವು.ಬಳಿಕ 1993ರಲ್ಲಿ ಅಮೆರಿಕದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಸ್ಟರ್ಲಿಂಗ್ ಜಾನ್ಸ್‌ಕೆನ್ ಅವರು, ಗ್ವಾಂಟಾನಾಮೋ ಸಂವಿಧಾನ ಬಾಹಿರ ಶಿಬಿರ ಎಂದು ಘೋಷಿಸಿದ್ದರು. ಆದರೆ ಸಿಐಎನ ರಹಸ್ಯ ತನಿಖಾ ಅಡ್ಡೆಯಾಗಿರುವ ಗ್ವಾಂಟಾನಾಮೋ ಯಾವುದಕ್ಕೂ ಜಗ್ಗಲೇ ಇಲ್ಲ. ಪ್ರಸ್ತುತ ಗ್ವಾಂಟಾನಾಮೋದಲ್ಲಿ ಸಾವಿರಾರು ಕೈದಿಗಳಿದ್ದು, ಅದರಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾದ ಅಲ್ ಕೈದಾದ ಖಾಲೀದ್ ಶೇಕ್ ಮೊಹಮ್ಮದ್, ಮುಸ್ತಾಫ್ ಅಹ್ಮದ್, ಅಲಿ ಅಬ್ದ್ ಅಲ್ ಅಜೀಜ್, ವಾಲಿದ್ ಬಿನ್ ಅತ್ತಾಸ್ ಸೇರಿದಂತೆ ಹಲವು ಮೋಸ್ಟ್ ವಾಟೆಂಡ್ ಉಗ್ರರು ಸೇರಿದ್ದಾರೆ.ಆ ನಿಟ್ಟಿನಲ್ಲಿ ಗ್ವಾಂಟಾನಾಮೋ ಕೈದಿಗಳ ಶಿಬಿರ ಬಂದ್ ಮಾಡುವ ಬರಾಕ್ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗತೊಡಗಿದೆ. |