ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರಿಂದ ಅಂತಾರಾಷ್ಟ್ರೀಯ ಭದ್ರತೆಗೆ ಧಕ್ಕೆ ಬಂದಿರುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಮಾಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾಕ್ ಮತ್ತು ಅಫ್ಘಾನಿಸ್ತಾನಿಗಳ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರ ಚಟುವಟಿಕೆ ಜಾಗತಿಕ ರಕ್ಷಣೆಗೆ ಸವಾಲೊಡ್ಡುವಂತಹದ್ದು. ಆ ನಿಟ್ಟಿನಲ್ಲಿ ತಮ್ಮ ನೇತೃತ್ವದ ಆಡಳಿತ ಭಯೋತ್ಪಾದನಾ ನೀತಿಯನ್ನು ಪುನರ್‌ಪರಿಶೀಲಿಸಲಿರುವುದಲ್ಲದೆ, ಆ ಭಾಗದ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸುವುದಾಗಿ ಬರಾಕ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಅಮೆರಿಕದ ಭಯೋತ್ಪಾದನಾ ವಿರುದ್ಧ ಸಮರದಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಪ್ರಮುಖ ಭಾಗದಲ್ಲಿದೆ. ಯಾಕೆಂದರೆ ಅಲ್ಲಿ ಉಗ್ರಗಾಮಿ ಚಟುವಟಿಕೆ ಜಾಗತಿಕವಾಗಿಯೇ ಮಾರಕವಾಗುವ ನಿಟ್ಟಿನಲ್ಲಿ ಬೆಳೆಯುತ್ತಿದೆ. ಇದೊಂದು ಅಂತಾರಾಷ್ಟ್ರೀಯ ಸಮಸ್ಯೆ. ಆ ನೆಲೆಯಲ್ಲಿ ನಾವು ಯಾಕೆ ಆ ಬಗ್ಗೆ ಗಂಭೀರವಾಗಿ ಹೆಜ್ಜೆಯನ್ನಿಡಬಾರದು ಎಂಬುದಾಗಿಯೂ ಬರಾಕ್ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿನ ಭಯೋತ್ಪಾದನಾ ಚಟುವಟಿಕೆ ಹಾಗೂ ಆ ಕುರಿತು ಬರಾಕ್ ಹುಸೇನ್ ಒಬಾಮ ಅವರು ನೀಡಿರುವ ಹೇಳಿಕೆ ಸ್ವಾಗತಾರ್ಹ ಎಂದು ಭಾರತದ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಪ್ರತಿಕ್ರಿಯಿಸಿದ್ದಾರೆ. |