ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಶಾಮೀಲಾಗಿರುವ ಅಜ್ಮಲ್ ಅಮಿರ್ ಕಸಬ್‌ನ ಕುರಿತ ತನಿಖೆಯನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಪಾಕಿಸ್ತಾನ ಸರ್ಕಾರ ಶುಕ್ರವಾರ ಭರವಸೆ ನೀಡಿದೆ.
ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ನಾವು ತನಿಖೆ ನಡೆಸುತ್ತಿದ್ದೇವೆ. ಈ ಬಗ್ಗೆ ಫೆಡರಲ್ ತನಿಖಾ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳು ತನಿಖೆಯನ್ನು ಆದಷ್ಟು ಶೀಘ್ರ ಅಂತಿಮಗೊಳಿಸಲಿವೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಮಲಿಕ್ ಅಹ್ಮದ್ ಖಾನ್ ಅವರು ಸಂಸತ್‌ನ ಕೆಳಮನೆಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.
ಸಂಸತ್ ಕಲಾಪದ ಪ್ರಶ್ನೋತ್ತರ ಅವಧಿ ಸಂದರ್ಭದಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮುಂಬೈ ದಾಳಿಯಲ್ಲಿ ಕಸಬ್ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದರು.
ಮುಂಬೈ ಭಯೋತ್ಪಾದನಾ ದಾಳಿ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಕಸಬ್ ಪಾಕ್ ಪ್ರಜೆ ಅಲ್ಲ ಎಂಬುದಾಗಿ ಮೊದಲು ಪಾಕ್ ಹೇಳಿಕೆ ನೀಡಿತ್ತು. ಬಳಿಕ ಕಸಬ್ ನಮ್ಮ ದೇಶದವನೇ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಹೇಳಿತ್ತು.
ಮುಂಬೈ ದಾಳಿ ಕುರಿತಂತೆ ಭಾರತ ಪಾಕಿಸ್ತಾನಕ್ಕೆ ಒದಗಿಸಿರುವ ಮಾಹಿತಿಯನ್ನು ಇತ್ತೀಚೆಗಷ್ಟೇ ವಿದೇಶಾಂಗ ರಾಯಭಾರಿಗಳಿಗೆ ವಿವರಿಸಿರುವ ಕುರಿತು ಖಾನ್ ಸದನದಲ್ಲಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹಾಗೂ ಆಂತರಿಕ ಸಚಿವಾಲಯದ ವರಿಷ್ಠ ರೆಹಮಾನ್ ಮಲಿಕ್‌ಗೆ ವಿವರಣೆ ನೀಡಿದರು. |